ನವದೆಹಲಿ, ಸೆ. 04 (DaijiworldNews/AA): ಫುಕೆಟ್ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ, ದಿಢೀರ್ 300 ಕೆಳಗೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ-ಪೈಲಟ್ ಮಾದಕ ವಸ್ತು ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿರುವುದಾಗಿ ತಿಳಿದುಬಂದಿದೆ.

ವಿಮಾನ ಒಡಿಶಾದ ಮೇಲೆ ಪ್ರಯಾಣದ ಹಂತದಲ್ಲಿ ಏಕಾಏಕಿ 300 ಅಡಿ ಕೆಳಕ್ಕೆ ಕುಸಿಯಿತು. ಇದೀಗ ಆ ವಿಮಾನದ ಸಹ-ಪೈಲಟ್ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.
ತಾಂತ್ರಿಕ ಮತ್ತು ಇತರ ಅಂಶಗಳ ಕುರಿತು ವಿವರವಾದ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ, ದೃಢೀಕರಣ ಪರೀಕ್ಷೆಯಲ್ಲಿ ಪಿಐಸಿ ಸೈಕೋ-ಆಕ್ಟಿವ್ ವಸ್ತು ಸೇವಿಸಿರುವುದು ದೃಢಪಟ್ಟಿದೆ. ಸೈಕೋ-ಆಕ್ಟಿವ್ ಪದಾರ್ಥಗಳ ಬಳಕೆಯ ದೃಢೀಕರಣವು ಗಂಭೀರ ಕಳವಳಕಾರಿಯಾಗಿದೆ. AAIB ಆದ್ಯತೆಯ ಮೇಲೆ DGCA ಯಿಂದ ಸೂಕ್ತ ಕ್ರಮಗಳನ್ನು ಶಿಫಾರಸು ಮಾಡುತ್ತದೆ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ ದ ಪ್ರಾಥಮಿಕ ವರದಿ ಮಾಡಿದೆ.
ಇದಕ್ಕೂ ಮುನ್ನ, ದೆಹಲಿಯಲ್ಲಿ ಹಾರಾಟದ ನಂತರದ ಪೈಲಟ್ ಅನ್ನು ತಪಾಸಣೆ ನಡೆಸಿದ ವೇಳೆ ಮಾದಕ ವಸ್ತು ಸೇವಿಸಿದ್ದು ದೃಢಪಟ್ಟಿತ್ತು. ಬಳಿಕ ನಡೆಸಿದ ಮತ್ತೊಂದು ಪರೀಕ್ಷೆಯಲ್ಲೂ ಪಾಸಿಟಿವ್ ಬಂದಿತ್ತು. ಪೈಲಟ್ ಗಾಂಜಾವನ್ನು ಸೇದಿದ್ದಾರೆ ಎಂದು ಪರೀಕ್ಷೆಯು ದೃಢಪಟ್ಟಿತ್ತು ಎನ್ನಲಾಗಿದೆ.
ಆಗಸ್ಟ್ 5 ರಂದು ಥಾಯ್ಲೆಂಡ್ನ ಫುಕೆಟ್ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ದೆಹಲಿ ತಲುಪುವ ವೇಳೆಗೆ, ಬೆಳಗಿನ ಜಾವ 11:00 ಗಂಟೆಯ ಸುಮಾರಿಗೆ ದಿಢೀರ್ ಎಂದು ತೀವ್ರ ಕುಲುಕಾಟಕ್ಕೆ ಒಳಗಾಯಿತು. ಈ ವೇಳೆ ವಿಮಾನವು ಸುಮಾರು 5 ನಿಮಿಷಗಳ ಕಾಲ ನಿಯಂತ್ರಣ ತಪ್ಪಿ ಏಕಾಏಕಿ 300 ಅಡಿಗಳಷ್ಟು ಕೆಳಕ್ಕೆ ಕುಸಿಯಿತು. ವಿಮಾನದಲ್ಲಿದ್ದ 8 ಸಿಬ್ಬಂದಿ ಸೇರಿ ಒಟ್ಟು 142 ಜನರ ಪೈಕಿ 4 ಕ್ರೂ ಸಿಬ್ಬಂದಿ ಸೇರಿ 17 ಮಂದಿ ಗಾಯಗೊಂಡಿದ್ದರು.