ದೆಹಲಿ, ಸೆ. 04 (DaijiworldNews/AA): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 'ಜಿಎಸ್ಎಲ್ವಿ-ಎಫ್17' ರಾಕೆಟ್ ಮೂಲಕ ಅತ್ಯಾಧುನಿಕ 'ಇಒಎಸ್-05' ಭೂ ವೀಕ್ಷಣಾ ಉಪಗ್ರಹವು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ನಸುಕಿನ ಜಾವ 2:55ರ ಸುಮಾರಿಗೆ ಯಶಸ್ವಿಯಾಗಿ ಉಡಾವಣೆಯಾಗಿದೆ. ಇಸ್ರೋದ ಈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, "ಜಿಎಸ್ಎಲ್ವಿ-ಎಫ್17 ಯಶಸ್ವಿ ಉಡಾವಣೆ ಇಸ್ರೋದ ಮತ್ತೊಂದು ಅತ್ಯುತ್ತಮ ಸಾಧನೆ ಮತ್ತು ನಮ್ಮ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ. ಜಿಯೋಸಿಂಕ್ರೋನಸ್ ಕಕ್ಷೆಯಿಂದ ಭಾರತದ ಮೊದಲ ಇಮೇಜಿಂಗ್ ಉಪಗ್ರಹವಾದ ಇಒಎಸ್-05 ಅನ್ನು ಹೊತ್ತ ಜಿಎಸ್ಎಲ್ವಿ-ಎಫ್17 ನ ಯಶಸ್ವಿ ಉಡಾವಣೆಯು ಭಾರತದ ಬಾಹ್ಯಾಕಾಶ ವಲಯವನ್ನ ವ್ಯಾಖ್ಯಾನಿಸುವ ಶ್ರೇಷ್ಠತೆ, ನಾವೀನ್ಯತೆ ಮತ್ತು ಬೆಳೆಯುತ್ತಿರುವ ಸಾಮರ್ಥ್ಯಗಳ ಪ್ರತಿಬಿಂಬವಾಗಿದೆ. ಇಸ್ರೋ ಮತ್ತು ಭಾರತೀಯ ಉದ್ಯಮದ ನಡುವಿನ ಬೆಳೆಯುತ್ತಿರುವ ಪಾಲುದಾರಿಕೆಯು ನಮ್ಮ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಹೊಸ ಶಕ್ತಿ ಮತ್ತು ಪ್ರಮಾಣವನ್ನು ಸೇರಿಸುತ್ತಿದೆ. ಅಲ್ಲದೇ ಇಡೀ ಬಾಹ್ಯಾಕಾಶ ಪರಿಸರ ವ್ಯವಸ್ಥೆಯಾದ್ಯಂತ ಭಾರತದ ಸಾಮರ್ಥ್ಯಗಳನ್ನ ವಿಸ್ತರಿಸುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಇಸ್ರೋ ಭಾರತದ ಮೊಟ್ಟಮೊದಲು ಇಒಎಸ್-05 ಇಮೇಜಿಂಗ್ ಉಪಗ್ರಹವನ್ನ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ 2ನೇ ಉಡಾವಣಾ ಪ್ಯಾಡ್ನಿಂದ ರಾಕೆಟ್ ಹಾರಿದ್ದು, ಭೂ ವೀಕ್ಷಣಾ ಸಾಟಲೈಟ್ ಇಒಎಸ್-05 ಅನ್ನು ಸಬ್-ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಗೆ ಯಶಸ್ವಿಯಾಗಿ ನಿಯೋಜನೆ ಮಾಡಲಾಗಿದೆ.