ಹೈದರಾಬಾದ್, ಸೆ. 04 (DaijiworldNews/AA): ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಮಗಳು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ತೆಲಂಗಾಣ ಅರಣ್ಯ ಸಚಿವೆ ಕೊಂಡ ಸುರೇಖಾ ಅವರನ್ನು ಸಚಿವ ಸಂಪುಟದಿಂದ ತಕ್ಷಣ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ. ಆದರೆ ಯಾವುದೇ ವಿವರಣೆ ಕೇಳದೆ ವಜಾಗೊಳಿಸಿರುವುದಕ್ಕೆ ಸಚಿವೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಸುರೇಖಾ, "ಮರಣದಂಡನೆ ಶಿಕ್ಷೆಗೆ ಒಳಗಾದ ಕೈದಿಗೂ ಕೊನೆಯ ಆಸೆ ಕೇಳಲಾಗುತ್ತದೆ, ಆದರೆ ನನಗೆ ಯಾವುದೇ ಮುನ್ಸೂಚನೆ ಅಥವಾ ವಿವರಣೆ ನೀಡುವ ಅವಕಾಶವನ್ನೇ ಕೊಡಲಿಲ್ಲ. ಯಾವುದೇ ವಿವರಣೆ ಕೇಳದೆ ಏಕಾಏಕಿ ಕೈಬಿಟ್ಟಿರುವುದು ಅನ್ಯಾಯ. ತಮ್ಮನ್ನು ತೆಗೆದುಹಾಕಲು ಸಿಎಂ ರೇವಂತ್ ರೆಡ್ಡಿ ಕಾಂಗ್ರೆಸ್ ಹೈಕಮಾಂಡ್ಗೆ ರಾಜೀನಾಮೆ ಬೆದರಿಕೆ ಹಾಕಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ" ಎಂದು ಆರೋಪಿಸಿದ್ದಾರೆ.
"ಸ್ವತಂತ್ರವಾಗಿ ಮಾತನಾಡುವ ಹಕ್ಕು ಹೊಂದಿರುವ ವಯಸ್ಕ ಮಗಳ ಹೇಳಿಕೆಗೆ ತಾಯಿಯನ್ನು ಹೊಣೆಗಾರರನ್ನಾಗಿ ಮಾಡುವುದು ತಪ್ಪು. ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಹಾಗೂ ಸಿಎಂ ಆಪ್ತರು ತಮ್ಮ ವಿರುದ್ಧ ಒಳಸಂಚು ರೂಪಿಸಿದ್ದಾರೆ. ಹಿಂದುಳಿದ ವರ್ಗದ (ಬಿಸಿ) ಹಿರಿಯ ನಾಯಕಿಯಾಗಿರುವ ತಮ್ಮನ್ನು ಅನ್ಯಾಯವಾಗಿ ಸಂಪುಟದಿಂದ ಕೈಬಿಟ್ಟಿರುವುದು ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರಲಿದೆ" ಎಂದು ಎಚ್ಚರಿಕೆ ನೀಡಿದ್ದಾರೆ.
"ನನ್ನ ಪುತ್ರಿ ಸುಶ್ಮಿತಾ ಸ್ವತಂತ್ರ ಆಲೋಚನೆ ಹೊಂದಿರುವ ವಯಸ್ಕ ಮಹಿಳೆ. ಆಕೆಯ ಮಾತುಗಳಿಗೆ ನನ್ನನ್ನು ದಂಡಿಸುವುದು ಎಷ್ಟು ಸರಿ ಆಕೆಯ ಹೇಳಿಕೆಯನ್ನು ನಾನು ಖಂಡಿಸಿದರೆ ನನ್ನ ಮಗಳನ್ನೇ ನಾನು ಕೀಳಾಗಿ ಕಂಡಂತೆ. ತಾವು ಪಕ್ಷ ಬಿಟ್ಟು ಹೋಗುವುದಿಲ್ಲ, ಬದಲಾಗಿ ಕಾಂಗ್ರೆಸ್ ಶಾಸಕಿಯಾಗಿಯೇ ಮುಂದುವರೆದು ಜನರಿಗಾಗಿ ಹೋರಾಡುತ್ತೇನೆ" ತಿಳಿಸಿದ್ದಾರೆ.
"ಹೈಕಮಾಂಡ್ಗೆ ನನ್ನನ್ನು ತೆಗೆಯುವ ಯಾವುದೇ ಇರಾದೆ ಇರಲಿಲ್ಲ. ಆದರೆ ಕೊಂಡ ಸುರೇಖಾರನ್ನು ಸಂಪುಟದಿಂದ ತೆಗೆಯದಿದ್ದರೆ ನಾನೇ ಮುಖ್ಯಮಂತ್ರಿ ಸ್ಥಾನ ಬಿಟ್ಟು ಹೋಗುತ್ತೇನೆ ಎಂದು ರೇವಂತ್ ರೆಡ್ಡಿ ಹೈಕಮಾಂಡ್ಗೆ ಬ್ಲ್ಯಾಕ್ಮೇಲ್ ಮಾಡಿ ಈ ನಿರ್ಧಾರ ಕೈಗೊಂಡಿದ್ದಾರೆ" ಎಂದು ಹೇಳಿದ್ದಾರೆ. ಇನ್ನು ತೆಲಂಗಾಣ ಸರ್ಕಾರದಲ್ಲಿ ತಮಗಾದ ಅನ್ಯಾಯ ಮತ್ತು ಸಿಎಂ ರೇವಂತ್ ರೆಡ್ಡಿ ಅವರ ದಬ್ಬಾಳಿಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಗೆ ಸಚಿವ ಪತ್ರ ಬರೆದು ದೂರು ಸಲ್ಲಿಸಿದ್ದಾರೆ.