ಶ್ರೀಹರಿಕೋಟಾ, ಸೆ. 04 (DaijiworldNews/AA): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 'ಜಿಎಸ್ಎಲ್ವಿ-ಎಫ್17' ರಾಕೆಟ್ ಮೂಲಕ ಅತ್ಯಾಧುನಿಕ 'ಇಒಎಸ್-05' ಭೂ ವೀಕ್ಷಣಾ ಉಪಗ್ರಹವು ಶುಕ್ರವಾರ ನಸುಕಿನ ಜಾವ 2:55ರ ಸುಮಾರಿಗೆ ಯಶಸ್ವಿಯಾಗಿ ಉಡಾವಣೆಯಾಗಿದೆ.

ಮುಂಜಾನೆ ಸುರಿದ ಮಳೆ ನಡುವೆಯೇ ಉಪಗ್ರಹವು ಯಶಸ್ವಿಯಾಗಿ ಕಕ್ಷೆ ಸೇರಿದೆ. ಈ ಉಪಗ್ರಹವು 26,000 ಕಿಲೋಮೀಟರ್ ಎತ್ತರದಿಂದ ಭಾರತದ ಗಡಿಗಳು ಮತ್ತು ಹವಾಮಾನ ಪರಿಸ್ಥಿತಿಯ ಮೇಲೆ ಹಗಲಿರುಳು ನಿರಂತರ ನಿಗಾ ಇರಿಸಲಿದೆ. ಈ ಯೋಜನೆಯು ದೇಶದ ವಿಪತ್ತು ನಿರ್ವಹಣೆ, ಕೃಷಿ ವಲಯದ ಬೆಳವಣಿಗೆ ಮತ್ತು ಗಡಿ ಕಣ್ಗಾವಲಿಗೆ ಶಕ್ತಿಯಾಗಲಿದೆ.
ಮೋಡ ಕವಿದ ವಾತಾವರಣದಲ್ಲೂ ನೆಲದ ಮೇಲ್ಮೈಯನ್ನು ನಿಖರವಾಗಿ ಸೆರೆಹಿಡಿಯುವ ಕ್ಯಾಮೆರಾಗಳನ್ನು ಉಪಗ್ರಹ ಹೊಂದಿದ್ದು, ಪ್ರಾಕೃತಿಕ ವಿಕೋಪಗಳ ಮುನ್ಸೂಚನೆ ಪಡೆಯಲು ಅಧಿಕಾರಿಗಳಿಗೆ ನೆರವಾಗಲಿದೆ. ಜೊತೆಗೆ, ಮುಂಬರುವ ಮಾನವಸಹಿತ ಗಗನಯಾನ ಯೋಜನೆಯ ಪೂರ್ವಸಿದ್ಧತೆಗೆ ಈ ಯಶಸ್ಸು ಇಸ್ರೋ ವಿಜ್ಞಾನಿಗಳಲ್ಲಿ ತಾಂತ್ರಿಕ ವಿಶ್ವಾಸ ಮೂಡಿಸಿದೆ.
ಜಿಎಸ್ಎಲ್ವಿ ಸರಣಿಯ 19ನೇ ಕಾರ್ಯಾಚರಣೆ ಇದಾಗಿದೆ. ಈ ಉಪಗ್ರಹವು ಸುಮಾರು 2,367 ಕೆಜಿ ತೂಕವಿದ್ದು, ಈ ರಾಕೆಟ್ ಹೊತ್ತೊಯ್ದ ಅತ್ಯಂತ ಭಾರವಾದ ಉಪಗ್ರಹವಾಗಿದೆ. ಈ ಉಪಗ್ರಹವು ಸಾಮಾನ್ಯ ದಿನಗಳಲ್ಲಿ ಪ್ರತಿ 30 ನಿಮಿಷಕ್ಕೊಮ್ಮೆ ಹಾಗೂ ಪ್ರವಾಹ ಅಥವಾ ಚಂಡಮಾರುತದಂತಹ ತುರ್ತು ಸಂದರ್ಭಗಳಲ್ಲಿ ಪ್ರತಿ 5 ನಿಮಿಷಕ್ಕೊಮ್ಮೆ ನೈಜ-ಸಮಯದ ಸ್ಪಷ್ಟ ಚಿತ್ರಗಳನ್ನು ರವಾನಿಸುವ ಅಪರೂಪದ ತಂತ್ರಜ್ಞಾನವನ್ನು ಹೊಂದಿದೆ.
ಈ ಉಪಗ್ರವು ವಿಸಿಬಲ್, ಇನ್ಫ್ರಾರೆಡ್, ಮಲ್ಟಿಸ್ಪೆಕ್ಟ್ರಲ್ ಹಾಗೂ ಹೈಪರ್ಸ್ಪೆಕ್ಟ್ರಲ್ ಬ್ಯಾಂಡ್ಗಳಲ್ಲಿ ಕಾರ್ಯನಿರ್ವಹಿಸುವ ಸೆನ್ಸರ್ಗಳನ್ನು ಹೊಂದಿದೆ. ಹೀಗಾಗಿ ಮೋಡ ಕವಿದ ವಾತಾವರಣದಲ್ಲೂ ಸ್ಪಷ್ಟ ಚಿತ್ರ ನೀಡುತ್ತದೆ.