ಗುಡದೂರು,ಸೆ. 03 (DaijiworldNews/AK): ಪಂಚ ಗ್ಯಾರಂಟಿಗಳೇ ರಾಜ್ಯದ ಅಭಿವೃದ್ಧಿ ಎಂಬಂತೆ ರಾಜ್ಯದ ಕಾಂಗ್ರೆಸ್ ಸರಕಾರ ವರ್ತಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ಬರಗಾಲದ ಕಾರಣ 5 ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು.

ನವಲಿ ಜಲಾಶಯ, ನಂದವಡಿ ಏತ ನೀರಾವರಿ ಆಗಬೇಕೆಂದು ಆಗ್ರಹಿಸಿ, ಬರ, ರೈತರ ಆತ್ಮಹತ್ಯೆ ಹಾಗೂ ರೈತ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ 3ನೇ ದಿನದ ಬಳ್ಳಾರಿ ಚಲೋ ಪಾದಯಾತ್ರೆಯು ಗುಡದೂರಿನಿಂದ ಬೆಳಿಗ್ಗೆ ಆರಂಭವಾಯಿತು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಡಿನ ರೈತರ ಜ್ವಲಂತ ಸಮಸ್ಯೆ ಬಗ್ಗೆ ಚರ್ಚಿಸಲು, ಬರಗಾಲದ ಪರಿಸ್ಥಿತಿ ಕುರಿತು ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸಿದರು.
ರೈತರ ನೆರವಿಗಾಗಿ ಹೊಸ ಜಲಾಶಯ
ಹೊಸಪೇಟೆ ಡ್ಯಾಮಿನಲ್ಲಿ 31 ಟಿಎಂಸಿ ಹೂಳು ತುಂಬಿದೆ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಡಿಪಿಆರ್ ಗೆ ಹಣ ಕೊಟ್ಟಿದ್ದರು; ನವಲಿ ಸಮಾನಾಂತರ ಜಲಾಶಯಕ್ಕೆ ಆದ್ಯತೆ ನೀಡಲು ಪ್ರಯತ್ನ ಮಾಡಿದ್ದರು ಎಂದು ಗಮನ ಸೆಳೆದರು. 190ಕ್ಕೂ ಹೆಚ್ಚು ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿಗೆ ರೈತರ ಬಗ್ಗೆ ಕಾಳಜಿಯೂ ಇಲ್ಲ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರಿಗೆ ರೈತರ ಬಗ್ಗೆ ಕಾಳಜಿಯೂ ಇಲ್ಲ. ಹೋರಾಟದ ಹಿನ್ನೆಲೆಯೂ ಇಲ್ಲ. ಗ್ರಾಮೀಣ ಭಾಗದ ರೈತರ ಸಮಸ್ಯೆ ಏನೆಂದು ಅರ್ಥ ಮಾಡಿಕೊಳ್ಳಲು ಆಗಿಲ್ಲ. ಹಿಂದೆ ಡಿಸಿಎಂ, ಬೆಂಗಳೂರು ಅಭಿವೃದ್ಧಿ ಸಚಿವರಾದುದರಿಂದ ರೈತರ ಸಂಕಷ್ಟಕ್ಕೆ ಸಮಯ ಕೊಡಲು ಆಗಿಲ್ಲ ಎಂದು ನುಡಿದರು.
ರಿಯಲ್ ಎಸ್ಟೇಟ್ ಕಡೆ ಹೆಚ್ಚು ಗಮನ ಕೊಡುವ ಮುಖ್ಯಮಂತ್ರಿಗಳು ಅದರಲ್ಲಿ ಶೇ 25ರಷ್ಟಾದರೂ ಸಮಯವನ್ನು ಈ ನಾಡಿನ ಅನ್ನದಾತನ ಬಗ್ಗೆ ಗಮನಿಸಬೇಕು. ಬರಗಾಲ ಭೀಕರವಾಗಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಲಿ ಎಂದು ಆಗ್ರಹಿಸಿದರು.
ದಲಿತರ ಅಭಿವೃದ್ಧಿಗಾಗಿ ಬಳಕೆ ಆಗಬೇಕಾದ ಎಸ್ಸಿಪಿ, ಟಿಎಸ್ಪಿ ಹಣವನ್ನು ಬೇರೆ ಬೇರೆ ಇಲಾಖೆಗಳಿಗೆ ಬಳಸುತ್ತಿದ್ದಾರೆ. ದಲಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.