ಚೆನ್ನೈ, ಸೆ. 03 (DaijiworldNews/AA): ಮದ್ರಾಸ್ ಹೈಕೋರ್ಟ್ನ ಅಧಿಕೃತ ಕಲಾಪ ಮತ್ತು ತೀರ್ಪುಗಳಲ್ಲಿ ಇಂಗ್ಲಿಷ್ ಭಾಷೆಯೊಂದಿಗೆ ಜೊತೆಗೆ ತಮಿಳು ಭಾಷೆಯನ್ನೂ ಬಳಸಲು ಅನುಮತಿ ನೀಡುವಂತೆ ಕೋರಿ ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ವಿಧಾನಸಭೆಯಲ್ಲಿ ಮಹತ್ವದ ನಿರ್ಣಯ ಮಂಡಿಸಿದ್ದಾರೆ.

ಈ ನಿರ್ಣಯದ ಅನ್ವಯ, ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿಗಳು, ದಾಖಲೆಗಳು ಮತ್ತು ವಕೀಲರ ವಾದ-ಪ್ರತಿವಾದಗಳನ್ನು ತಮಿಳಿನಲ್ಲೇ ಸಲ್ಲಿಸಲು ಅವಕಾಶ ಕೋರಲಾಗಿದೆ. ಜೊತೆಗೆ ನ್ಯಾಯಾಲಯದ ಆದೇಶಗಳು ಹಾಗೂ ತೀರ್ಪುಗಳನ್ನು ತಮಿಳಿನಲ್ಲೇ ಪ್ರಕಟಿಸಿ, ಅಗತ್ಯ ಕಾನೂನು ಬಳಕೆಗಾಗಿ ಇಂಗ್ಲಿಷ್ ಅನುವಾದವನ್ನು ಜತೆಗಿರಿಸಲು ಪ್ರಸ್ತಾಪಿಸಲಾಗಿದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ಕೆಳ ಹಂತದ ನ್ಯಾಯಾಲಯಗಳಲ್ಲಿ ತಮಿಳು ಭಾಷೆ ಬಳಕೆಯಲ್ಲಿದ್ದು, ಇದನ್ನು ಹೈಕೋರ್ಟ್ಗೂ ವಿಸ್ತರಿಸುವುದು ಸಹಜವಾದ ಮುಂದಿನ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
"ಹಿಂದೆ 2006 ರಲ್ಲಿ ಇಂತಹದೇ ನಿರ್ಣಯ ಅಂಗೀಕಾರವಾಗಿದ್ದರೂ, 2012 ರಲ್ಲಿ ಸುಪ್ರೀಂ ಕೋರ್ಟ್ ಇದನ್ನು ತಿರಸ್ಕರಿಸಿತ್ತು. ಆದರೆ ಈಗ ಡಿಜಿಟಲ್ ನ್ಯಾಯಾಲಯಗಳು ಹಾಗೂ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತ್ವರಿತ ಭಾಷಾಂತರ ತಂತ್ರಜ್ಞಾನಗಳು ಲಭ್ಯವಿರುವುದರಿಂದ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಸರ್ಕಾರ ಒತ್ತಾಯಿಸಿದೆ. ಉತ್ತರ ಭಾರತದ ಹಲವು ಹೈಕೋರ್ಟ್ಗಳಲ್ಲಿ ಹಿಂದಿ ಬಳಕೆಗೆ ನೀಡಿರುವಂತೆಯೇ, ತಮಿಳುನಾಡಿಗೂ ತನ್ನ ಮಾತೃಭಾಷೆ ಬಳಕೆಗೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳು ಸಮ್ಮತಿ ನೀಡಬೇಕೆಂಬುದು ಈ ನಿರ್ಣಯದ ಪ್ರಮುಖ ಆಶಯವಾಗಿದೆ" ಎಂದಿದ್ದಾರೆ.
"ನ್ಯಾಯಾಲಯ ನೀಡುವ ತೀರ್ಪುಗಳು ಮತ್ತು ಆದೇಶಗಳನ್ನು ತಮಿಳು ಭಾಷೆಯಲ್ಲೇ ಪ್ರಕಟಿಸಬೇಕು. ಕಾನೂನು ಅಗತ್ಯತೆಗಳಿಗಾಗಿ ಅದರ ಜತೆಗೆ ಇಂಗ್ಲಿಷ್ ಅಧಿಕೃತ ಅನುವಾದ ಲಭ್ಯವಿರಲಿದೆ. ಹೈಕೋರ್ಟ್ನಲ್ಲಿ ಅರ್ಜಿಗಳು, ದಾಖಲೆಗಳು ಹಾಗೂ ವಕೀಲರ ವಾದ-ಪ್ರತಿವಾದಗಳನ್ನು ತಮಿಳಿನಲ್ಲೇ ಸಲ್ಲಿಸಲು ನಿಯಮಬದ್ಧ ಅವಕಾಶ ಕಲ್ಪಿಸಬೇಕು" ಎಂದು ಮನವಿ ಮಾಡಿದ್ದಾರೆ.
"ಇದು ಇಂಗ್ಲಿಷ್ ಭಾಷೆಯನ್ನು ಬದಿಗೊತ್ತುವ ನಿರ್ಧಾರವಲ್ಲ. ಬದಲಿಗೆ ಸಾಮಾನ್ಯ ನಾಗರಿಕರಿಗೆ ತಮ್ಮ ಕೇಸಿನ ವಿವರ ಮತ್ತು ನ್ಯಾಯದ ಪ್ರಕ್ರಿಯೆ ನೇರವಾಗಿ ಅರ್ಥವಾಗುವಂತೆ ಮಾಡುವ ಜನಪರ ಕ್ರಮವಾಗಿದೆ" ಎಂದು ಸ್ಪಷ್ಟನೆ ನೀಡಿದ್ದಾರೆ.