ನವದೆಹಲಿ,ಸೆ. 03 (DaijiworldNews/AK): ಖಾಸಗಿ ದ್ವಿಚಕ್ರ ವಾಹನ ಮಾಲೀಕರು ಬೈಕ್ ಟ್ಯಾಕ್ಸಿ ಸೇವೆ ನಿರ್ವಹಿಸಲು ಅವಕಾಶ ನೀಡುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಬುಧವಾರ ಮಾತನಾಡಿದ್ದು, ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಖಾಸಗಿ ದ್ವಿಚಕ್ರ ವಾಹನಗಳ ಮೂಲಕ ಪ್ರಯಾಣಿಕರನ್ನ ಸಾಗಿಸುವ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಲಾಗಿದೆ. ಆದರೆ ಕೆಲ ರಾಜ್ಯಗಳಲ್ಲಿ ಇಂತಹ ಸೇವೆಗಳಿಗೆ ಇನ್ನೂ ಅವಕಾಶ ನೀಡಲಾಗಿಲ್ಲ. ಸಾರಿಗೆ ಸೌಲಭ್ಯವು ರಾಜ್ಯಗಳ ವ್ಯಾಪ್ತಿಗೆ ಬರುವ ವಿಷಯ ಆಗಿರುವುದರಿಂದ, ತಮ್ಮ ತಮ್ಮ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ಜಾರಿಗೆ ತರಬೇಕೇ ಅಥವಾ ಬೇಡವೇ ಎಂಬುದನ್ನ ರಾಜ್ಯ ಸರ್ಕಾರಗಳೇ ನಿರ್ಧರಿಸಬೇಕು ಎಂದು ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಸೀಮಿತವಾಗಿವೆ, ಹೀಗಿರುವಾಗ ಬೈಕ್ ಟ್ಯಾಕ್ಸಿ ಸೇವೆಯು ಜನರಿಗೆ ಹೊಸ ಆದಾಯದ ಮೂಲವಾಗಬಹುದು. ಖಾಸಗಿ ದ್ವಿಚಕ್ರ ವಾಹನಗಳನ್ನ ಬಳಸಿಕೊಂಡು ಜನರು ಹೆಚ್ಚುವರಿ ಆದಾಯ ಗಳಿಸಲು ಇದು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೈಕ್ ಟ್ಯಾಕ್ಸಿ ಸೇವೆಗಳನ್ನು ಉತ್ತೇಜಿಸುವುದರಿಂದ ಸುಮಾರು 8 ಕೋಟಿ ಜನರಿಗೆ ಉದ್ಯೋಗ ಸಿಗಲಿದೆ. ಉದ್ಯೋಗಾವಕಾಶಗಳು ಕಡಿಮೆ ಇರುವ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಯು ಹೆಚ್ಚಿನ ಪ್ರಯೋಜನಕಾರಿಯಾಗಲಿದೆ ಎಂದು ಸಚಿವರು ಸಲಹೆ ನೀಡಿದ್ದಾರೆ.
ಆದರೆ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಲು ಅಗತ್ಯವಿರುವ ಪರವಾನಗಿ, ವಿಮೆ ಹಾಗೂ ಇತರ ನಿಯಮಗಳು ಆಯಾ ರಾಜ್ಯಗಳ ಕಾನೂನು ಮತ್ತು ನಿಯಮಾವಳಿಗಳ ಮೇಲೆ ಅವಲಂಬಿತವಾಗಿರುತ್ತವೆ. ಹೀಗಾಗಿ ಕೇಂದ್ರ ಸಚಿವರ ಹೇಳಿಕೆಯ ಆಧಾರದ ಮೇಲೆ ದೇಶದ ಎಲ್ಲ ರಾಜ್ಯಗಳಲ್ಲೂ ತಕ್ಷಣವೇ ಬೈಕ್ ಟ್ಯಾಕ್ಸಿಗೆ ಅನುಮತಿ ದೊರೆಯುತ್ತವೆ ಅನ್ನೋದು ಸರಿಯಲ್ಲ ಎಂದು ತಿಳಿಸಿದ್ದಾರೆ.