ಚಂಡೀಗಢ, ಸೆ. 03 (DaijiworldNews/AA): ಪಂಜಾಬ್ನ ಕರಡು ಮತದಾರರ ಪಟ್ಟಿಯಿಂದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ಡಿಲೀಟ್ ಮಾಡಲಾಗಿದೆ.

ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ಡಿಲೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ರಾಘವ್ ಚಡ್ಡಾ, "ಇದು ಎಎಪಿಯ ರಾಜಕೀಯ ಸೇಡು. ತಮ್ಮ ಮತದಾರರ ಗುರುತಿನ ಚೀಟಿಯನ್ನು ಮೊಹಾಲಿಯಲ್ಲಿ ನೋಂದಾಯಿಸಲಾಗಿದೆ. ತಮ್ಮನ್ನು 'ಸ್ಥಳಾಂತರಿಸಲಾಗಿದೆ' ಎಂದು ಏಕೆ ವರ್ಗೀಕರಿಸಲಾಗಿದೆ? ಇದು ಕೇವಲ ಗುಮಾಸ್ತರ ತಪ್ಪಿನಂತೆ ಕಾಣುತ್ತಿಲ್ಲ. ಇದು ರಾಜಕೀಯ ಸೇಡಿನಿಂದ ಕೂಡಿದೆ. ಪಕ್ಷವನ್ನು ತೊರೆದವರ ವಿರುದ್ಧ ಎಎಪಿ ಸರ್ಕಾರ ಅಧಿಕಾರಿಗಳನ್ನು ಬಳಸಿ ಹೆಸರು ಡಿಲೀಟ್ ಮಾಡಿದೆ" ಎಂದು ತಿಳಿಸಿದ್ದಾರೆ.
"ನಾನು ಭ್ರಷ್ಟ ಆಮ್ ಆದ್ಮಿ ಪಕ್ಷವನ್ನು ತೊರೆದಾಗಿನಿಂದ, ಅದರ ನಾಯಕರು ಕೋಪದಿಂದ ಕುದಿಯುತ್ತಿದ್ದಾರೆ. ನಮ್ಮ ವಿರುದ್ಧ ಅದು ಪಂಜಾಬ್ ಪೊಲೀಸ್ ಮತ್ತು ಪಂಜಾಬ್ ಸರ್ಕಾರದ ಆಡಳಿತ ಯಂತ್ರದ ಬಲಪ್ರಯೋಗ ನಡೆಯುತ್ತಿದೆ. ಎಎಪಿ ತೊರೆದು ಬಿಜೆಪಿಗೆ ಸೇರಿದ ಇತರ ಸಂಸದರನ್ನು ಸಹ ಪಂಜಾಬ್ ಸರ್ಕಾರ ಗುರಿಯಾಗಿಸಿಕೊಂಡಿದೆ. ಈಗ ಅದು ಮತದಾರರ ಪಟ್ಟಿಯಲ್ಲಿ ಹೆಸರು ಅಳಿಸುವ ಮೂಲಕ ಸೇಡು ತೀರಿಸಿಕೊಂಡಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.
ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಅಡಿಯಲ್ಲಿ ಸಿದ್ಧಪಡಿಸಲಾದ ಪಂಜಾಬ್ ಕರಡು ಮತದಾರರ ಪಟ್ಟಿಯಿಂದ ರಾಘವ್ ಚಡ್ಡಾ ಅವರ ಹೆಸರನ್ನು ತೆಗೆದುಹಾಕಲಾಗಿದೆ. ಶಾಶ್ವತವಾಗಿ ಶಿಫ್ಟ್ ಆಗಿದ್ದಾರೆ ಎಂದು ಅವರ ಹೆಸರನ್ನು ಗುರುತಿಸಲಾಗಿದೆ. 2022 ರಲ್ಲಿ ಪಂಜಾಬ್ನಿಂದ ಎಎಪಿ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದ ಅವರು ಇತ್ತೀಚೆಗೆ ಬಿಜೆಪಿಗೆ ಸೇರಿದ್ದರು.