ನವದೆಹಲಿ, ಸೆ. 03 (DaijiworldNews/AA): ಭಾರತೀಯ ವಾಯುಪಡೆಯ ಮಾಜಿ ಗ್ರೂಪ್ ಕ್ಯಾಪ್ಟನ್ ಹಾಗೂ ವಿರಚಕ್ರ ಪುರಸ್ಕೃತ ಅಭಿನಂದನ್ ವರ್ಧಮಾನ್ ಅವರು ಇದೀಗ ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ FLY91ಗೆ ಪೈಲಟ್ ಆಗಿ ಸೇರ್ಪಡೆಯಾಗಿದ್ದಾರೆ.

ಪ್ರಸ್ತುತ ಅವರು ಗೋವಾ ಮತ್ತು ಹೈದರಾಬಾದ್ ಮಾರ್ಗದಲ್ಲಿ ಎಟಿಆರ್ ವಿಮಾನ ಸಂಚರಿಸುವ ಕುರಿತು ತರಬೇತಿಯಲ್ಲಿ ನಿರತರಾಗಿದ್ದಾರೆ. ತರಬೇತಿ ಪೂರ್ಣಗೊಂಡ ಬಳಿಕ ವಿಮಾನ ಸಂಚಾರ ನಡೆಸಲಿದ್ದಾರೆ ಎಂದು ಕಂಪನಿಯ ಮೂಲಗಳಿಂದ ತಿಳಿದುಬಂದಿದೆ. ಅಭಿನಂದನ್ ಅವರು 2026ರ ಆಗಸ್ಟ್ನಲ್ಲಿ FLY91 ಸಂಸ್ಥೆಗೆ ಸೇರ್ಪಡೆಗೊಂಡಿದ್ದಾರೆ ಎಂದು ಹೇಳಲಾಗಿದೆ.
2019ರ ಫೆಬ್ರವರಿ 27ರಂದು ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆ ವೇಳೆ ಅಭಿನಂದನ್ ವರ್ಧಮಾನ್ ಅವರು ಮಿಗ್-21 ಬೈಸನ್ ಯುದ್ಧವಿಮಾನವನ್ನು ಹಾರಿಸುತ್ತಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಒಂದು ಯುದ್ಧವಿಮಾನವನ್ನು ಹೊಡೆದುರುಳಿಸಿದ ಬಳಿಕ ಅವರ ವಿಮಾನಕ್ಕೂ ಕ್ಷಿಪಣಿ ಅಪ್ಪಳಿಸಿತ್ತು. ಹೀಗಾಗಿ ಅಭಿನಂದನ್ ಪ್ಯಾರಾಶೂಟ್ ಮೂಲಕ ಹೊರಗೆ ಜಿಗಿದಿದ್ದು, ಈ ವೇಳೆ ಅವರು ಪಾಕಿಸ್ತಾನದ ಭೂಪ್ರದೇಶದಲ್ಲಿ ಇಳಿದಿದ್ದಾರೆ. ಬಳಿಕ ಪಾಕ್ ಸೇನೆ ಅವರು 60 ಗಂಟೆಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದರು. ಅವರನ್ನು 2019ರ ಮಾರ್ಚ್ 1ರಂದು ಅಟ್ಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಯಿತು.
2019ರ ವೈಮಾನಿಕ ಕಾರ್ಯಾಚರಣೆಯಲ್ಲಿ ತೋರಿದ ಶೌರ್ಯ ಮತ್ತು ಕರ್ತವ್ಯಪ್ರಜ್ಞೆಗಾಗಿ ಅಭಿನಂದನ್ ವರ್ಧಮಾನ್ ಅವರಿಗೆ 2021ರಲ್ಲಿ ವಿರಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.