ಬಿಹಾರ, ಸೆ. 03 (DaijiworldNews/AA): ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಈ ಪೈಕಿ ಅರ್ಹ ಅಭ್ಯರ್ಥಿಗಳಷ್ಟೇ ಉತ್ತೀರ್ಣರಾಗುವಲ್ಲಿ ಸಫಲಾರಗುತ್ತಾರೆ. ಆದರೆ ತಮ್ಮ ದೃಷ್ಟಿಹೀನತೆಯನ್ನು ಮೆಟ್ಟಿನಿಂತು 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 20ನೇ ರ್ಯಾಂಕ್ ಪಡೆದು ಉತ್ತೀರ್ಣರಾದ ರವಿ ರಾಜ್ ಅವರ ಯಶೋಗಾಥೆ ಇದು.

ರವಿ ರಾಜ್ ಕೃಷಿಕ ಕುಟುಂಬದಿಂದ ಬಂದವರು. ಅವರ ತಂದೆ ರಂಜನ್ ಕುಮಾರ್ ಸಿನ್ಹಾ ರೈತರಾಗಿದ್ದು, ತಾಯಿ ವಿಭಾ ಸಿನ್ಹಾ ಗೃಹಿಣಿಯಾಗಿದ್ದಾರೆ. ನವಾಡಾದಲ್ಲೇ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಅವರು, ಎಸ್ಆರ್ಎಸ್ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿದ್ದಾರೆ.
ರವಿ ಅವರಿಗೆ ದೃಷ್ಟಿಹೀನತೆಯಿಂದಾಗಿ ಸಾಮಾನ್ಯ ರೀತಿಯಲ್ಲಿ ಪುಸ್ತಕಗಳನ್ನು ಓದಲು ಅಥವಾ ಬರೆಯಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ಸವಾಲು ಅವರ ಕನಸಿಗೆ ಅಡ್ಡಿಯಾಗಲಿಲ್ಲ. ರವಿ ಅವರ ಯುಪಿಎಸ್ಸಿ ತಯಾರಿಕೆಯ ಪ್ರಮುಖ ಆಧಾರವಾಗಿದ್ದು ಅವರ ತಾಯಿ ವಿಭಾ. ಅವರು ತಮ್ಮ ಮಗನಿಗೆ ಬೆನ್ನೆಲುಬಾಗಿ ನಿಂತು ಯುಪಿಎಸ್ಸಿ ತಯಾರಿಗೆ ಸಹಾಯ ಮಾಡಿದರು.
ಪಠ್ಯಪುಸ್ತಕಗಳು, ಪತ್ರಿಕೆಗಳು ಮತ್ತು ಅಧ್ಯಯನ ಸಾಮಗ್ರಿಗಳನ್ನು ಪುಟದಿಂದ ಪುಟಕ್ಕೆ ಜೋರಾಗಿ ಓದಿ ರವಿಗೆ ಕೇಳಿಸುತ್ತಿದ್ದರು. ರವಿ ಅದನ್ನು ಗಮನವಿಟ್ಟು ಆಲಿಸಿ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು. ಲಿಖಿತ ಉತ್ತರಗಳನ್ನು ಸಿದ್ಧಪಡಿಸಬೇಕಾದಾಗ ರವಿ ಉತ್ತರಗಳನ್ನು ಹೇಳುತ್ತಿದ್ದರು, ತಾಯಿ ಅವುಗಳನ್ನು ಬರೆದುಕೊಳ್ಳುತ್ತಿದ್ದರು. ವಿಷಯವಾರು ಟಿಪ್ಪಣಿಗಳನ್ನು ಸಿದ್ಧಪಡಿಸುವುದರ ಜೊತೆಗೆ ಓದಿನಲ್ಲೂ ತಾಯಿ ನಿರಂತರವಾಗಿ ನೆರವಾಗುತ್ತಿದ್ದರು.
ಮನೆಯಲ್ಲಿಯೇ ಅವರ ಯುಪಿಎಸ್ಸಿ ತಯಾರಿ ಮುಂದುವರಿಯಿತು. ಆಡಿಯೋ ಉಪನ್ಯಾಸಗಳು, ಯೂಟ್ಯೂಬ್ ವಿಡಿಯೋಗಳು, ಡಿಜಿಟಲ್ ಅಧ್ಯಯನ ಸಂಪನ್ಮೂಲಗಳು ಹಾಗೂ ಸಹಾಯಕ ತಂತ್ರಜ್ಞಾನಗಳನ್ನು ರವಿ ವ್ಯಾಪಕವಾಗಿ ಬಳಸಿಕೊಂಡರು.
ತಾಯಿ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲೂ ರವಿಗಾಗಿ ಯೂಟ್ಯೂಬ್ನ ಉಪನ್ಯಾಸಗಳನ್ನು ಪ್ಲೇ ಮಾಡುತ್ತಿದ್ದರು. ರವಿ ಪ್ರತಿದಿನ ಸುಮಾರು 10ರಿಂದ 12 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಶಿಸ್ತುಬದ್ಧ ತಯಾರಿಯೇ ಅವರ ಜೀವನದ ಅವಿಭಾಜ್ಯ ಭಾಗವಾಗಿತ್ತು.
ರವಿ ಅವರು ತಮ್ಮ ಆರಂಭಿಕ ಪ್ರಯತ್ನಗಳಲ್ಲಿ ಹಲವು ಹಿನ್ನಡೆಗಳನ್ನು ಎದುರಿಸಿದ ಬಳಿಕ 2024ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ 182ನೇ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾದರು. ಈ ಸಾಧನೆಯ ಆಧಾರದ ಮೇಲೆ ಅವರಿಗೆ ಭಾರತೀಯ ಕಂದಾಯ ಸೇವೆಯಲ್ಲೂ ಅವಕಾಶ ದೊರೆತಿದ್ದು, ಆದಾಯ ತೆರಿಗೆ ಆಯುಕ್ತರ ಹುದ್ದೆಯೂ ಲಭಿಸಿತ್ತು. ಆದರೆ ರವಿ ತಮ್ಮ ರ್ಯಾಂಕ್ ಅನ್ನು ಮತ್ತಷ್ಟು ಸುಧಾರಿಸಬೇಕೆಂಬ ಗುರಿಯೊಂದಿಗೆ ತಯಾರಿ ಮುಂದುವರಿಸಿದರು.
ಅಂತಿಮವಾಗಿ ರವಿ ಅವರ ನಿರಂತರ ಪರಿಶ್ರಮಕ್ಕೆ ಫಲ ದೊರೆಯಿತು. 2025ರ ಯುಪಿಎಸ್ಸಿ ಪರೀಕ್ಷೆಯಲ್ಲಿ ರವಿ ಅವರು ಅಖಿಲ ಭಾರತ 20ನೇ ರ್ಯಾಂಕ್ ಪಡೆದರು. ಈ ಮೂಲಕ ಅನೇಕ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಮಾದರಿಯಾಗಿದ್ದಾರೆ.