ಬೆಂಗಳೂರು,ಸೆ. 02 (DaijiworldNews/AK): ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮುಂದೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ನೀಡಿರುವ ಹೇಳಿಕೆಗಳು ಇದೀಗ ಮಹತ್ವ ಪಡೆದುಕೊಂಡಿವೆ.

ಪ್ರಶ್ನೆಪತ್ರಿಕೆ ಸಿದ್ಧತೆ ಹಾಗೂ ಪರಿಶೀಲನೆಗೆ ಸಂಬಂಧಿಸಿದಂತೆ ಗ್ಯಾನೇಂದ್ರ ಹಲವು ಮಹತ್ವದ ಮಾಹಿತಿಗಳನ್ನು ತನಿಖಾಧಿಕಾರಿಗಳ ಮುಂದೆ ಬಿಚ್ಚಿಟ್ಟಿದ್ದಾರೆ. CID ವಿಚಾರಣೆ ವೇಳೆ, 6 ಮಾದರಿ ಪ್ರಶ್ನೆಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸುತ್ತಿದ್ದೆ ಎಂದು ಗ್ಯಾನೇಂದ್ರ ಹೇಳಿಕೆ ನೀಡಿದ್ದಾರೆ.
ಪ್ರಶ್ನೆಪತ್ರಿಕೆಗಳು ಪ್ರಿಂಟ್ ಆಗುವ ಮುನ್ನವೇ ಅವುಗಳನ್ನ ಮನೆಯಲ್ಲಿ ಪರಿಶೀಲನೆ ಮಾಡುತ್ತಿದ್ದೆ. ಈ ಮೂಲಕ ಕರ್ತವ್ಯ ಲೋಪವಾಗಿದೆ ಎಂದು ತಪ್ಪೊಪ್ಪಿಕೊಂಡಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ. ಆದರೆ ಇದೇ ವಿಚಾರದಲ್ಲಿ ಗ್ಯಾನೇಂದ್ರ ನೀಡಿರುವ ಮತ್ತೊಂದು ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಪ್ರಶ್ನೆಪತ್ರಿಕೆ ಪರಿಶೀಲನೆಗಾಗಿ ಮನೆಗೆ ತೆಗೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಬಸವರಾಜ್ ಪದೇಪದೇ ಮನೆಗೆ ಬರುತ್ತಿದ್ದ. ತಮಗೆ ಅರಿವಿಲ್ಲದಂತೆ ಬಸವರಾಜ್ ಪ್ರಶ್ನೆಪತ್ರಿಕೆಯಲ್ಲಿದ್ದ ಮಾಹಿತಿಯನ್ನು ಬರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ತಾನು ಸರಿಯಾಗಿ ಗಮನ ಹರಿಸಿರಲಿಲ್ಲ. ಯಾವುದೇ ತಪ್ಪು ಆಗಿದ್ದರೂ ಅದು ಬಸವರಾಜ್ನಿಂದಲೇ ಆಗಿದೆ. ಬಸವರಾಜ್ ಪ್ರಶ್ನೆಪತ್ರಿಕೆಯನ್ನ ಕಳ್ಳತನ ಮಾಡಿದ್ದಾನೆ ಎಂಬುದು ಈಗ ಗೊತ್ತಾಗಿದೆ ಎಂದು ಗ್ಯಾನೇಂದ್ರ ಹೇಳಿಕೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.