ಹರಿಯಾಣ, ಸೆ. 02 (DaijiworldNews/TA): ಯಮುನಾನಗರ ಜಿಲ್ಲೆಯ ಹತ್ನಿಕುಂಡ್ ಬ್ಯಾರೇಜ್ನಲ್ಲಿ ತರಬೇತಿ ಕವಾಯತು ನಡೆಸುತ್ತಿದ್ದ ವೇಳೆ ಸೇನಾ ದೋಣಿಯೊಂದು ಅಪಘಾತಕ್ಕೀಡಾಗಿ, ಓರ್ವ ಸೈನಿಕ ಯಮುನಾ ನದಿಯಲ್ಲಿ ನಾಪತ್ತೆಯಾಗಿರುವ ಘಟನೆ ಮಂಗಳವಾರ ನಡೆದಿದೆ.

ಘಟನೆ ಬಳಿಕ ನಾಪತ್ತೆಯಾಗಿರುವ ಸೈನಿಕನಿಗಾಗಿ ಸೇನೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ. ಯಮುನಾನಗರದ ತಂಡಗಳ ಜೊತೆಗೆ ನೆರೆಯ ಉತ್ತರ ಪ್ರದೇಶದಿಂದಲೂ ವಿಪತ್ತು ನಿರ್ವಹಣಾ ಸಿಬ್ಬಂದಿ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ. ಮಂಗಳವಾರ ಸಂಜೆ ಕೆಲವು ಸೇನಾ ಸಿಬ್ಬಂದಿ ಹತ್ನಿಕುಂಡ್ ಬ್ಯಾರೇಜ್ನಲ್ಲಿ ತರಬೇತಿ ಕವಾಯತು ನಡೆಸುತ್ತಿದ್ದ ವೇಳೆ ದೋಣಿ ಅಪಘಾತಕ್ಕೀಡಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ ಎಂದು ಯಮುನಾನಗರದ ಪ್ರತಾಪ್ ನಗರ ಪೊಲೀಸ್ ಠಾಣೆಯ ಎಸ್ಎಚ್ಒ ರೋಹ್ತಾಶ್ ತಿಳಿಸಿದ್ದಾರೆ.
ದೋಣಿಯಲ್ಲಿ ಸುಮಾರು ನಾಲ್ಕರಿಂದ ಐದು ಸೈನಿಕರು ಇದ್ದರು ಎನ್ನಲಾಗಿದ್ದು, ಈ ಪೈಕಿ ನಾಲ್ವರು ನದಿಗೆ ಕೊಚ್ಚಿಹೋಗಿದ್ದರು. ಅವರಲ್ಲಿ ಮೂವರು ಈಜಿಕೊಂಡು ಸುರಕ್ಷಿತವಾಗಿ ದಡ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಪತ್ತೆಯಾಗಿರುವ ಸೈನಿಕನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಘಟನೆಯ ನಿಖರ ಕಾರಣ ತಿಳಿಯಲು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.