ಅಮರಾವತಿ, ಸೆ. 02 (DaijiworldNews/TA): ಮಲೇರಿಯಾ ತಡೆಗಾಗಿ ನೀಡಲಾಗಿದ್ದ ಕ್ಲೋರೊಕ್ವಿನ್ ಮಾತ್ರೆ ಸೇವಿಸಿದ ಬಳಿಕ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಪೊಲಾವರಂ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಘಟನೆ ಬಳಿಕ 52 ಮಂದಿ ಅಸ್ವಸ್ಥಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಲೇರಿಯಾ ನಿಯಂತ್ರಣದ ಭಾಗವಾಗಿ ಗ್ರಾಮದಲ್ಲಿ ಒಟ್ಟು 71 ಮಂದಿಗೆ ಕ್ಲೋರೊಕ್ವಿನ್ ಮಾತ್ರೆಗಳನ್ನು ವಿತರಿಸಲಾಗಿತ್ತು. ಮಾತ್ರೆ ಸೇವಿಸಿದ ಬಳಿಕ ಕೆಲವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿದೆ. ಈ ಪೈಕಿ 2ನೇ ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಮದಿವಿ ಜಮುನಾ ಎಂಬ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮಾತ್ರೆ ಸೇವಿಸಿದ ಬಳಿಕ ಅಸ್ವಸ್ಥಗೊಂಡಿರುವ 52 ಮಂದಿಯಲ್ಲಿ 29 ಜನರನ್ನು ತೆಲಂಗಾಣದ ವಿವಿಧ ಆಸ್ಪತ್ರೆಗಳಿಗೆ ಹಾಗೂ 24 ಮಂದಿಯನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲಾ ರೋಗಿಗಳ ಆರೋಗ್ಯ ಸ್ಥಿರವಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದಿನೇಶ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿರುವ ಅವರು, ಪರಿಸ್ಥಿತಿ ನಿಯಂತ್ರಿಸಲು ಜಿಲ್ಲಾ ಆಡಳಿತದಿಂದ ವಿಶೇಷ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ. ಮೂವರು ಮಕ್ಕಳ ತಜ್ಞರನ್ನು ಒಳಗೊಂಡ ವೈದ್ಯಕೀಯ ತಂಡಗಳು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯ ವೈದ್ಯಕೀಯ ಸೇವೆ ಒದಗಿಸಲು ವಿಶೇಷ ಶಿಬಿರವನ್ನೂ ಆರಂಭಿಸಲಾಗಿದೆ. ಕಾಕಿನಾಡ ಸರ್ಕಾರಿ ಆಸ್ಪತ್ರೆಯಿಂದ 9 ತಜ್ಞ ವೈದ್ಯರ ತಂಡ ಈಗಾಗಲೇ ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ವಿಜಯವಾಡ, ರಾಜಮಹೇಂದ್ರವರಂ ಹಾಗೂ ಕಾಕಿನಾಡದಿಂದ ಇನ್ನೂ ಮೂರು ವೈದ್ಯಕೀಯ ತಂಡಗಳು ಗ್ರಾಮಕ್ಕೆ ಆಗಮಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಪರಿಸ್ಥಿತಿ ಮತ್ತು ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಮಾತ್ರೆ ಸೇವನೆಯ ಬಳಿಕ ಅಸ್ವಸ್ಥತೆ ಉಂಟಾಗಲು ಕಾರಣವೇನು ಎಂಬುದರ ಕುರಿತು ಸಂಪೂರ್ಣ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಅಲ್ಲದೆ, ಅಸ್ವಸ್ಥರಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಾತ್ರೆಯ ಗುಣಮಟ್ಟ, ಸೇವಿಸಿದ ಪ್ರಮಾಣ ಹಾಗೂ ಅಸ್ವಸ್ಥತೆಗೆ ನಿಖರ ಕಾರಣವೇನು ಎಂಬುದನ್ನು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.