ಮಸ್ಕಿ (ರಾಯಚೂರು), ಸೆ. 02 (DaijiworldNews/AK): ದಲಿತರಿಗೆ, ಹಿಂದುಳಿದ ವರ್ಗಗಳಿಗೆ ಈ ಸರ್ಕಾರ ನ್ಯಾಯ ಕೊಡಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ. ಆಗ ಜನರೇ ತೀರ್ಮಾನ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸವಾಲು ಹಾಕಿದ್ದಾರೆ.

‘ಬಳ್ಳಾರಿ ಚಲೋ’ ಪಾದಯಾತ್ರೆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ದಲಿತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕಳೆದ ಮೂರುವರೆ ವರ್ಷದಲ್ಲಿ ಅವರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ವಾಲ್ಮೀಕಿ ನಿಗಮದಲ್ಲಿ ರೂ. 187 ಕೋಟಿ ಹಗರಣ ಮಾಡಿದರು.
ಮೀಸಲಾತಿಯನ್ನು ಸರಿಯಾಗಿ ಅನುಷ್ಟನ ಮಾಡಲಿಲ್ಲ. ಮೀಸಲಾತಿ ನೆಪ ಹೇಳಿಕೊಂಡು ಯುವಕರಿಗೆ ಉದ್ಯೋಗ ನೀಡಲಿಲ್ಲ. ಕೇವಲ ದಲಿತರು ಮಾತ್ರವಲ್ಲ ಎಲ್ಲಾ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದರು. ಒಟ್ಟಾರೆ ಅಖಂಡ ಕರ್ನಾಟಕವನ್ನು ಕಡೆಗಣಿಸಿದೆ ಎಂದು ಆಪಾದಿಸಿದರು.
ಇನ್ನಷ್ಟು ವಿಕೆಟ್ ಬೀಳಲಿವೆ
ಡಿಕೆಶಿ ಸರ್ಕಾರದ ಇನ್ನೂ ಎರಡು ಮೂರು ವಿಕೆಟ್ಗಳು ಬೀಳಲು ತಯಾರು ಆದಂತೆ ಇದೆ. ಈ ಎಲ್ಲರಿಗೂ ಭ್ರಷ್ಟಾಚಾರ ಉರುಳಾಗಲಿದೆ. ಲಜ್ಜೆಗೆಟ್ಟ ಕಾಂಗ್ರೆಸ್ನವರಿಗೆ ಮಾನ, ಮರ್ಯಾದೆ ಏನೂ ಇಲ್ಲ. ಆನೆ ನಡೆದಿದ್ದೇ ದಾರಿ ಎಂದುಕೊಂಡಿದ್ದವರ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಾರಂಭಿಸಿದೆ. ನಮ್ಮೊಂದಿಗೆ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಅನ್ನದಾತರ ಸಮಸ್ಯೆಗಳನ್ನು ಆಲಿಸುವ ಕನಿಷ್ಠ ಸೌಜನ್ಯವನ್ನೂ ಸಿಎಂ ತೋರುತ್ತಿಲ್ಲ ಎಂದು ದೂರಿದರು.
ಈಗ ಕಾಟಾಚಾರದ ಬರವೀಕ್ಷಣೆ
ಬಿಜೆಪಿ ವತಿಯಿಂದ ರಾಜ್ಯದಲ್ಲಿ ಈಗಾಗಲೇ ಬರ ವೀಕ್ಷಣೆ ಮಾಡಿದ್ದೇವೆ. ಈವರೆಗೆ ಬರಗಾಲ ಪರಿಶೀಲನೆಗೆ ಹೋಗದ ಸಿಎಂ ಮತ್ತು ಡಿಸಿಎಂ ಈಗ ಬರ ವೀಕ್ಷಣೆ ಆರಂಭಿಸಿದ್ದಾರೆ. ಎ.ಸಿ. ಹಾಲಿನಲ್ಲೇ ಕುಳಿತಿದ್ದವರು ಈಗ ಅನಿವಾರ್ಯವಾಗಿ ರೈತರ ಸಮಸ್ಯೆ ಆಲಿಸಲು ಮುಂದಾಗಿದ್ದಾರೆ. ಇವರು ಹೀಗೆ ಮಾಡಲು ನಮ್ಮ ಹೋರಾಟವೇ ಕಾರಣ ಎಂದರು.