ನವದೆಹಲಿ, ಸೆ. 01 (DaijiworldNews/AA): ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರಿಗೆ ಮಂಗಳವಾರ ಅಂಚೆ ಮೂಲಕ 'ತೀವ್ರಗಾಮಿ ಉಗ್ರರು ಶೀಘ್ರದಲ್ಲೇ ನಿಮ್ಮನ್ನು ಕೊಲೆ ಮಾಡುತ್ತಾರೆ' ಎಂಬ ಜೀವ ಬೆದರಿಕೆ ಪತ್ರ ಬಂದಿದೆ.

ಈ ಬೆದರಿಕೆ ಪತ್ರ ಬಂದ ಬೆನ್ನಲ್ಲೇ ಚಿರಾಗ್ ಪಾಸ್ವಾನ್ ಅವರ ಕಚೇರಿ ಕೇಂದ್ರ ಗೃಹ ಕಾರ್ಯದರ್ಶಿಯವರಿಗೆ ಪತ್ರ ಬರೆದಿದೆ. ಈ ಪತ್ರದಲ್ಲಿ "ಕೇಂದ್ರ ಗೃಹ ಸಚಿವಾಲಯದಿಂದ ಝಡ್ ಶ್ರೇಣಿಯ ಭದ್ರತೆ ಪಡೆಯುತ್ತಿರುವ ಕೇಂದ್ರ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವರ ವೈಯಕ್ತಿಕ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಚಾರವನ್ನು ನಿಮ್ಮ ತುರ್ತು ಗಮನಕ್ಕೆ ತರಲು ನನಗೆ ನಿರ್ದೇಶಿಸಲಾಗಿದೆ" ಎಂದು ತಿಳಿಸಲಾಗಿದೆ.
"2 ಮೊಬೈಲ್ ಸಂಖ್ಯೆಗಳನ್ನು ಒಳಗೊಂಡ ಅನಾಮಧೇಯ ಪತ್ರವೊಂದು ಇಂದು ಸಚಿವಾಲಯಕ್ಕೆ ತಲುಪಿದೆ. ಅದನ್ನು ತೆರೆದು ನೋಡಿದಾಗ, ಅದರಲ್ಲಿ ಕೇಂದ್ರ ಸಚಿವರ ಜೀವಕ್ಕೆ ನೇರ ಬೆದರಿಕೆ ಹಾಕಿರುವುದು ಕಂಡುಬಂದಿದೆ. ಆ ಬೆದರಿಕೆಯಲ್ಲಿ 'ತೀವ್ರಗಾಮಿ ಉಗ್ರರಿಂದ ಶೀಘ್ರದಲ್ಲೇ ನಿಮ್ಮ ಹತ್ಯೆಯಾಗಲಿದೆ' ಎಂದು ಬರೆಯಲಾಗಿದೆ" ಎಂದು ಚಿರಾಗ್ ಪಾಸ್ವಾನ್ ಅವರ ಹೆಚ್ಚುವರಿ ವೈಯಕ್ತಿಕ ಕಾರ್ಯದರ್ಶಿ ಆಲೋಕ್ ಕುಮಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಬೆದರಿಕೆ ಪತ್ರದ ಮೂಲ, ಸತ್ಯಾಸತ್ಯತೆ ಮತ್ತು ಅದರ ಹಿನ್ನೆಲೆಯನ್ನು ಯಾವುದೇ ವಿಳಂಬವಿಲ್ಲದೆ ಕೂಲಂಕಷವಾಗಿ ತನಿಖೆ ನಡೆಸಬೇಕು. ಚಿರಾಗ್ ಪಾಸ್ವಾನ್ ಅವರ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಬೆದರಿಕೆಯ ತೀವ್ರತೆಯನ್ನು ಪರಿಗಣಿಸಿ, ಅವರ ಪ್ರಸ್ತುತ ಭದ್ರತೆಯನ್ನು ಪರಿಶೀಲಿಸಬೇಕು ಮತ್ತು ಅಗತ್ಯವಿದ್ದರೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು" ಎಂದು ಪತ್ರದ ಮೂಲಕ ಮನವಿ ಮಾಡಲಾಗಿದೆ.