ನವದೆಹಲಿ, ಸೆ. 01 (DaijiworldNews/AA): ಅಗತ್ಯ ಇದ್ದರಷ್ಟೇ ಚಿನ್ನ ಖರೀದಿಸಿ, ಮನರಂಜನೆಗೆ ವಿದೇಶ ಪ್ರವಾಸ, ಹೊರ ದೇಶಗಳಲ್ಲಿ ಮದುವೆ ಬೇಡ. ದೇಶೀಯ ಬಳಕೆಯನ್ನು ಉತ್ತೇಜಿಸುವಂತೆ ಪ್ರಧಾನಿ ನರೇಂದ್ರ ಮೋದಿ ನಾಗರಿಕರಿಗೆ ಕರೆ ನೀಡಿದ್ದಾರೆ.

ದೇಶದ ಆರ್ಥಿಕತೆ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, "ಭಾರತದ ಜಿಡಿಪಿ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 7.8ರಷ್ಟು ಅಸಾಧಾರಣ ಬೆಳವಣಿಗೆ ಸಾಧಿಸಿರುವುದಕ್ಕೆ ಮೋದಿ ಅವರು ದೇಶದ ಜನತೆಯನ್ನು ಅಭಿನಂದಿಸಿದ್ದಾರೆ. ಜೊತೆಗೆ 'ಆತ್ಮನಿರ್ಭರ ಭಾರತ' ಸಂಕಲ್ಪವನ್ನು ಮತ್ತಷ್ಟು ಬಲಪಡಿಸಬೇಕು" ಎಂದು ಹೇಳಿದ್ದಾರೆ.
"ದೇಶದ ಜನತೆಗೆ ಅನಂತ ಧನ್ಯವಾದಗಳು. ಶೇ. 7.8ರಷ್ಟು ಜಿಡಿಪಿ ಬೆಳವಣಿಗೆಯು ದೇಶದಲ್ಲಿ ಸಂತಸ ಮೂಡಿಸಿದೆ. ದೇಶವಾಸಿಗಳ ಸಂಕಲ್ಪ ಶಕ್ತಿ ಮತ್ತು ಕಠಿಣ ಪರಿಶ್ರಮಕ್ಕೆ ನನ್ನ ಅಭಿನಂದನೆಗಳು. ಇದು ನಮ್ಮ ಸಾಮೂಹಿಕ ಶಕ್ತಿಯ ಪ್ರತಿಬಿಂಬವಾಗಿದೆ" ಸಂದೇಶ ನೀಡಿದ್ದಾರೆ.
"ಇಡೀ ವಿಶ್ವವೇ ಯುದ್ಧದ ಕಾರ್ಮೋಡದಲ್ಲಿ ಮುಳುಗಿದೆ. ಸುತ್ತಲೂ ಯುದ್ಧದ ಸುದ್ದಿಗಳೇ ಕೇಳಿಬರುತ್ತಿವೆ ಮತ್ತು ಜಗತ್ತು ಬಿಕ್ಕಟ್ಟುಗಳಿಂದ ಸುತ್ತುವರಿದಿದೆ. ಸಪ್ಲೈ ಚೈನ್ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. 2020ರ ಕೋವಿಡ್ ಸಾಂಕ್ರಾಮಿಕದ ದಿನಗಳಿಂದ ಇಂದಿನವರೆಗೂ ಜಗತ್ತಿನ ಎಲ್ಲಿಯೂ ಸ್ಥಿರತೆ ಕಾಣಿಸುತ್ತಿಲ್ಲ. ಆದಾಗ್ಯೂ, ಭಾರತವು ವೇಗದ ಗತಿಯಲ್ಲಿ ಮುನ್ನಡೆಯುತ್ತಿದೆ" ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಖರೀದಿ ಅಥವಾ ಪ್ರವಾಸದ ಸಂದರ್ಭದಲ್ಲಿ ಸ್ವದೇಶಿ ವಸ್ತುಗಳು ಮತ್ತು ಸೇವೆಗಳಿಗೆ ಒತ್ತು ನೀಡಿ. ಪ್ರವಾಸೋದ್ಯಮಕ್ಕಾಗಿ ವಿದೇಶಗಳಿಗೆ ಹೋಗಬೇಡಿ. ವಿದೇಶಗಳಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಆಯೋಜಿಸುವುದನ್ನು ತಪ್ಪಿಸಿ. ನಾವೆಲ್ಲರೂ ವೆಡ್ ಇನ್ ಇಂಡಿಯಾ ಮಂತ್ರವನ್ನು ಪಾಲಿಸಬೇಕು. ಅಗತ್ಯವಿಲ್ಲದಿದ್ದರೆ ಮಾತ್ರ ಚಿನ್ನ ಖರೀದಿಸಿ. ನಾವು ಎಷ್ಟರಮಟ್ಟಿಗೆ ಸ್ಥಳೀಯ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸುತ್ತೇವೆಯೋ, ಅಷ್ಟೇ ವೇಗವಾಗಿ ಭಾರತ ಅಭಿವೃದ್ಧಿ ಹೊಂದಲಿದೆ. ಸ್ವಾವಲಂಬನೆಗೆ ಇದೇ ರೀತಿ ಒತ್ತು ನೀಡಿದರೆ, ಸ್ವಾತಂತ್ರ್ಯದ 100ನೇ ವರ್ಷಕ್ಕೆ ಕಾಲಿಡುವ ವೇಳೆಗೆ ನಮ್ಮ ಯುವಜನತೆಗೆ 'ಅಭಿವೃದ್ಧಿ ಹೊಂದಿದ ಭಾರತ' ಹಸ್ತಾಂತರಿಸಲಿದ್ದೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ" ಎಂದರು.
"ನಮ್ಮ ಕಠಿಣ ಪರಿಶ್ರಮದ ಮೂಲಕ ಇಂದಿನ ಯುವಜನತೆಯ ಕನಸುಗಳನ್ನು ನನಸು ಮಾಡುತ್ತೇವೆ. ನಮ್ಮ ನೀತಿಗಳು ಸರಿಯಾಗಿವೆ, ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಇಂದು 140 ಕೋಟಿ ದೇಶವಾಸಿಗಳ ಒಗ್ಗಟ್ಟಿನ ಶಕ್ತಿಯು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ" ಎಂದು ನುಡಿದರು.