ನವದೆಹಲಿ, ಸೆ. 01 (DaijiworldNews/AA): ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಒಂದು ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ದಿಢೀರ್ ಆಫ್ ಆಗಿದ್ದು, ತಕ್ಷಣ ಗೋವಾ ವಿಮಾನ ನಿಲ್ದಾಣದಲ್ಲಿಯೇ ತುರ್ತು ಭೂಸ್ಪರ್ಶ ಮಾಡಲಾಗಿದೆ.

ಮಂಗಳವಾರ ಬೆಳಗ್ಗೆ ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ವಿಮಾನದ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ದಿಢೀರ್ ಆಫ್ ಆಗಿದೆ. ತಕ್ಷಣ ಎಚ್ಚೆತ್ತುಕೊಂಡ ಪೈಲೆಟ್ ವಿಮಾನವನ್ನು ಗೋವಾಗೆ ವಾಪಸ್ ತಿರುಗಿಸಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ. ಬಳಿಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಮೂಲಗಳಿಂದ ತಿಳಿದುಬಂದಿದೆ.
'ಸೆಪ್ಟೆಂಬರ್ 1ರಂದು ಉತ್ತರ ಗೋವಾದಿಂದ ದೆಹಲಿಗೆ ತೆರಳುತ್ತಿದ್ದ 6E 2102 ವಿಮಾನದಲ್ಲಿ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಬಂದಿದೆ. ಬಳಿಕ ಪೈಲಟ್ಗಳು ವಿಮಾನವನ್ನ ಹಿಂದಕ್ಕೆ ತಿರುಗಿಸಿ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ' ಎಂದು ಇಂಡಿಗೋ ಪ್ರಕಟಣೆ ಹೊರಡಿಸಿದೆ.
'ಪ್ರಸ್ತುತ ವಿಮಾನವು ನಿರ್ವಹಣಾ ತಪಾಸಣೆಗೆ ಒಳಪಡಿಸಲಾಗಿದೆ. ಅಗತ್ಯವಿರುವ ಎಲ್ಲಾ ಅನುಮತಿಗಳನ್ನ ಪಡೆದ ಬಳಿಕ ವಿಮಾನ ಮತ್ತೆ ಕಾರ್ಯಾಚರಣೆ ಆರಂಭಿಸಲಿದೆ. ಪ್ರಯಾಣಿಕರಿಗೆ ಉಪಾಹಾರ ಸೇರಿದಂತೆ ಅಗತ್ಯ ನೆರವು ಒದಗಿಸಲಾಗಿದೆ ಮತ್ತು ಸಮಯೋಚಿತ ಮಾಹಿತಿಯನ್ನು ನೀಡಲಾಗಿದೆ. ಪ್ರಯಾಣಿಕರು ತಮ್ಮ ನಿಗದಿತ ಸ್ಥಾನ ತಲುಪಲು ಪರ್ಯಾಯ ವ್ಯವಸ್ಥೆಯನ್ನೂ ಮಾಡಲಾಗಿದೆ' ಎಂದು ತಿಳಿಸಿದೆ.