ಚೆನ್ನೈ, ಸೆ. 01 (DaijiworldNews/AK): ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯ 52 ಪ್ರಮುಖ ದೇಗುಲಗಳಲ್ಲಿ ಮೊಬೈಲ್ ತೆಗೆದುಕೊಂಡು ಹೋಗಲು ಸಂಪೂರ್ಣ ನಿಷೇಧ ಹೇರಲಾಗಿದ್ದು, ಇಂದಿನಿಂದ (ಸೆ.1) ಜಾರಿಗೆ ಬಂದಿದೆ.

ದೇಗುಲಗಳ ಪಾವಿತ್ರ್ಯ ಹಾಗೂ ಶಾಂತ ವಾತಾವರಣ ಕಾಪಾಡುವುದು, ಸೆಲ್ಫಿ, ಫೋಟೋ, ವಿಡಿಯೋ ಹಾಗೂ ಸಾಮಾಜಿಕ ಜಾಲತಾಣಗಳ ರೀಲ್ಸ್ ಚಿತ್ರೀಕರಣ ತಡೆಯುವುದು ಇದರ ಉದ್ದೇಶವಾಗಿದೆ.
ದೇಗುಲಗಳಿಗೆ ಬರುವ ಭಕ್ತರು ತಮ್ಮ ಮೊಬೈಲ್ಗಳನ್ನು ಪ್ರವೇಶ ದ್ವಾರಗಳ ಬಳಿ ಸ್ಥಾಪಿಸಿರುವ ಸುರಕ್ಷಿತ ಠೇವಣಿ ಕೇಂದ್ರಗಳಲ್ಲಿ 5 ರೂ. ಶುಲ್ಕ ನೀಡಿ ಇಡಬೇಕು. ಮೊಬೈಲ್ ಸ್ವೀಕರಿಸಿದ ಬಳಿಕ ರಸೀದಿ ನೀಡಲಾಗುತ್ತದೆ. ಫೋನ್ ಹಿಂದಿರುಗಿಸುವ ವೇಳೆ ರಸೀದಿಯನ್ನು ಪರಿಶೀಲಿಸಿ, ಸಾಧನವನ್ನು ಹಸ್ತಾಂತರಿಸುವ ವ್ಯವಸ್ಥೆ ಮಾಡಲಾಗಿದೆ.
ಕಾಂಚೀಪುರಂನ ಪ್ರಸಿದ್ಧ ದೇವರಾಜಸ್ವಾಮಿ ಅತ್ತಿವರದರ್ ದೇಗುಲದಲ್ಲೂ ಮಂಗಳವಾರ (ಸೆ.1) ಬೆಳಗ್ಗೆಯಿಂದಲೇ ವ್ಯವಸ್ಥೆ ಜಾರಿಗೆ ಬಂದಿದೆ. ಭಕ್ತರ ಫೋಟೋ, ಮೊಬೈಲ್ ಮಾದರಿ ಮತ್ತು ಸಂಖ್ಯೆಯಂತಹ ವಿವರಗಳನ್ನು ದಾಖಲಿಸಿ, ಫೋನ್ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತಿದೆ. ಮೊಬೈಲ್ ನಿಷೇಧ ಜಾರಿಯಾಗಿರುವ ದೇಗುಲಗಳ ಪೈಕಿ ಮದುರೈ ಮೀನಾಕ್ಷಿ ಅಮ್ಮನ್, ಪಳನಿ ದಂಡಾಯುಧಪಾಣಿ, ರಾಮೇಶ್ವರಂ ರಾಮನಾಥಸ್ವಾಮಿ, ತಿರುಚೆಂದೂರು ಸುಬ್ರಹ್ಮಣ್ಯಸ್ವಾಮಿ, ಶ್ರೀರಂಗಂ ರಂಗನಾಥಸ್ವಾಮಿ, ತಿರುವಣ್ಣಾಮಲೈ ಅರುಣಾಚಲೇಶ್ವರ, ತಿರುವತ್ತಣಿ ಸುಬ್ರಹ್ಮಣ್ಯಸ್ವಾಮಿ, ಚೆನ್ನೈನ ಕಪಾಲೀಶ್ವರ ಮತ್ತು ಪಾರ್ಥಸಾರಥಿ ದೇಗುಲಗಳು ಸೇರಿವೆ.
ಈ ನಿರ್ಧಾರವು 2022ರ ಮದ್ರಾಸ್ ಹೈಕೋರ್ಟ್ನ ಮದುರೈ ಪೀಠದ ನಿರ್ದೇಶನಕ್ಕೆ ಅನುಗುಣವಾಗಿ ಕೈಗೊಳ್ಳಲಾಗಿದೆ.