ಬೆಂಗಳೂರು, ಸೆ. 01 (DaijiworldNews/AA): ಈ ಇಡೀ ಹಗರಣಕ್ಕೆ ಬಸವರಾಜ್ ಕನ್ನಾಳಿ ಪ್ರಮುಖ ರೂವಾರಿ. ಆತ ಹೇಳಿದಂತೆಯೇ ನಾನು ಕೆಲಸ ಮಾಡಿದ್ದೇನೆ ಎಂದು ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪಶುವೈದ್ಯಾಧಿಕಾರಿ ನೇಮಕ ಅಕ್ರಮ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ತಪ್ಪೊಪ್ಪಿಕೊಂಡಿದ್ದಾರೆ.

"ನಾನು ಯಾವುದೇ ಅಭ್ಯರ್ಥಿಗಳ ಜೊತೆ ನೇರವಾಗಿ ಮಾತನಾಡಿಲ್ಲ ಅಥವಾ ಮುಖಾಮುಖಿ ಭೇಟಿಗೆ ಅವಕಾಶ ನೀಡಿಲ್ಲ. ಅಭ್ಯರ್ಥಿಗಳನ್ನು ಸಂಪರ್ಕಿಸಿ ಡೀಲ್ ಕುದುರಿಸಿದ್ದೆಲ್ಲವೂ ಬಸವರಾಜ್" ಎಂದು ಜ್ಞಾನೇಂದ್ರ ಹೇಳಿಕೆ ನೀಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
"ಬೀದರ್ನಿಂದಲೇ ಬಸವರಾಜ್ ಪರಿಚಯವಿದ್ದ. ಆತ ರಾಜಕಾರಣಿಯಂತೆ ಬಿಂಬಿಸಿಕೊಂಡಿದ್ದರಿಂದ ಆತನ ಮಾತನ್ನು ಸಂಪೂರ್ಣವಾಗಿ ನಂಬಿದ್ದೆ. ಜಯಮಹಲ್ನಲ್ಲಿರುವ ಮನೆ ಹಾಗೂ ನಗರದ ವಿವಿಧ ಹೋಟೆಲ್ಗಳಲ್ಲಿ ಭೇಟಿಯಾಗಿ ಡೀಲ್ ಕುರಿತು ಚರ್ಚೆ ನಡೆಸುತ್ತಿದ್ದೆವು" ಎಂದು ವಿಚಾರಣೆ ವೇಳೆ ಹೇಳಿದ್ದಾರೆ.
"ಪ್ರಿಂಟ್ ಆದ ಪ್ರಶ್ನೆ ಪತ್ರಿಕೆಯನ್ನು ನೇರವಾಗಿ ಹೊರಗೆ ತಂದಿಲ್ಲ. ಬದಲಾಗಿ, ಪ್ರಶ್ನೆ ಪತ್ರಿಕೆ ಪ್ರಿಂಟ್ ಆಗುವ ಮೊದಲೇ ಸುಮಾರು ಶೇ. 60ರಷ್ಟು ಪ್ರಶ್ನೆಗಳನ್ನು ಬರೆದುಕೊಳ್ಳಲಾಗಿತ್ತು. ನಾವು ಬರೆದುಕೊಂಡಿದ್ದ ಪ್ರಶ್ನೆಗಳ ಸರಣಿಗೇ ನಾನು ಪ್ರಿಂಟ್ ಹಾಕಲು ಅಂತಿಮ ಒಪ್ಪಿಗೆ ನೀಡಿದ್ದೆ" ಎಂದು ಹೇಳಿಕೆ ನೀಡಿದ್ದಾರೆ.
ಜ್ಞಾನೇಂದ್ರ ಕುಮಾರ್ ಬಂಧನದ ಬೆನ್ನಲ್ಲೇ ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಹಾಗೂ ಭಾಲ್ಕಿಯ ಮುಖಂಡ ಬಸವರಾಜ್ ಕನ್ನಾಳೆಯನ್ನು ದೆಹಲಿಯಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಬೆಂಗಳೂರಿಗೆ ಕರೆತಂದು ಸುದೀರ್ಘ ವಿಚಾರಣೆ ನಡೆಸಿ, ಜ್ಞಾನೇಂದ್ರ ಕುಮಾರ್ ಹಾಗೂ ಬಸವರಾಜ್ ಇಬ್ಬರನ್ನೂ ಕೋರ್ಟ್ಗೆ ಹಾಜರುಪಡಿಸಿದ್ದಾರೆ.