ಲಿಂಗಸುಗೂರು(ರಾಯಚೂರು), ಸೆ. 01 (DaijiworldNews/AK):ಭ್ರಷ್ಟ, ಜನವಿರೋಧಿ, ದಲಿತ ವಿರೋಧಿ, ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ಸರ್ಕಾರ ವಿರುದ್ಧ ಹೋರಾಟ ಆರಂಭವಾಗಿದೆ. ಪಾದಯಾತ್ರೆ 10ಕ್ಕೆ ಮುಗಿಯಬಹುದು. ಆದರೆ ಈ ಸರ್ಕಾರದ ವಿರುದ್ಧ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ.

ಗುರುಗುಂಟಾದ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ ಒಂದೂವರೆ ಎರಡು ವರ್ಷ ಈ ಜನವಿರೋಧಿ ಭ್ರಷ್ಟ ಸರ್ಕಾರದ ಬಣ್ಣ ಬಯಲು ಮಾಡಲಿದ್ದೇವೆ ಎಂದು ಹೇಳಿದರು. ಈ ಸರ್ಕಾರವನ್ನು ನಾವು ಬುಡಸಮೇತ ಕಿತ್ತೊಗೆಯುತ್ತೇವೆ. ಅಲ್ಲಿವರೆಗೆ ನಮ್ಮ ಹೋರಾಟ ನಡೆಲಿದೆ. ಮುಂದೆ ನಮ್ಮ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ತಿಳಿಸಿದರು.
ಐತಿಹಾಸಿಕ ಪಾದಯಾತ್ರೆ...ಇದು ಹತ್ತು ದಿನಗಳ ಪಾದಯಾತ್ರೆ
ನಮ್ಮ ಪಕ್ಷದ ಎಲ್ಲ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ. ಉತ್ತರ ಕರ್ನಾಟಕ ಭಾಗದ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ನಮ್ಮ ಕಾರ್ಯಕರ್ತರು ಅತಿ ಉತ್ಸಾಹದಿಂದ ಇದರಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇದೊಂದು ಐತಿಹಾಸಿಕ ಪಾದಯಾತ್ರೆ ಎಂದು ವಿಶ್ಲೇಷಿಸಿದರು.
ಬಿಎಸ್ ವೈ ಅವರಿಂದ ಚಾಲನೆ
ಪಾದಯಾತ್ರೆಗೆ ಮಾಜಿ ಮುಖ್ಯಮಂತ್ರಿ, ನಾಡು ಕಂಡ ಅಪ್ರತಿಮ ಹೋರಾಟಗಾರ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಶಿವನಗೌಡ ನಾಯಕ್, ಸ್ಥಳೀಯ ಶಾಸಕರಾದ ಮಾನಪ್ಪ ವಜ್ಜಲ್, ಪಕ್ಷದ ಮುಖಂಡರಾದ ಬಂಗಾರು ಹನುಮಂತು ಸೇರಿದಂತೆ ಹಲವಾರು ಮುಖಂಡರು ಪಾದಯಾತ್ರೆಯಲ್ಲಿ ಭಾಗವಹಿಲಿದ್ದಾರೆ. ಈ ಭಾಗದ ಶಾಸಕರು, ಮುಖಂಡರು, ಕಾರ್ಯಕರ್ತರು ಈ ಪಾದಯಾತ್ರೆ ಯಶಸ್ವಿಯಾಗಿ ನಡೆಯಲು ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ ಎಂದು ವಿವರಿಸಿದರು.