ನವದೆಹಲಿ, ಆ. 31 (DaijiworldNews/AK): ಸಿಂಧೂ ನದಿ ನೀರು ಒಪ್ಪಂದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ನ್ಯಾಯಾಲಯ ನೀಡಿರುವ ಆದೇಶವನ್ನು ಭಾರತ ಇಂದು (ಆಗಸ್ಟ್ 31) ಸಂಪೂರ್ಣವಾಗಿ ತಿರಸ್ಕರಿಸಿದೆ. ಈ ಸಂಸ್ಥೆಯನ್ನು ಕಾನೂನುಬಾಹಿರವಾಗಿ ರಚಿಸಲಾಗಿದೆ ಮತ್ತು ಭಾರತದ ಸಾರ್ವಭೌಮ ನಿರ್ಧಾರಗಳ ಮೇಲೆ ತೀರ್ಪು ನೀಡಲು ಇದಕ್ಕೆ ಯಾವುದೇ ಅಧಿಕಾರ ವ್ಯಾಪ್ತಿಯಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಕಳೆದ ವರ್ಷ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಾದ ನಂತರ, ಪಾಕಿಸ್ತಾನದ ಗಡಿಯಲ್ಲಿ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ವಿರೋಧಿಸಿ ಭಾರತವು 1960ರ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿತ್ತು.
ವಿಶ್ವಬ್ಯಾಂಕ್ ಒಪ್ಪಂದದ ನಿಯಮಗಳನ್ನು ನೇರವಾಗಿ ಉಲ್ಲಂಘಿಸಿ ಈ ನ್ಯಾಯಾಲಯವನ್ನು ರಚಿಸಿದೆ. ಭಾರತವು ಈ ಸಂಸ್ಥೆಯ ಅಸ್ತಿತ್ವವನ್ನು ಕಾನೂನುಬದ್ಧವಾಗಿ ಎಂದಿಗೂ ಒಪ್ಪಿಕೊಂಡಿಲ್ಲ. ಹೀಗಾಗಿ, ಅದರ ಯಾವುದೇ ನಿರ್ಧಾರಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಹಾಗೇ, ಭಾರತದ ಸಾರ್ವಭೌಮ ನಿರ್ಧಾರಗಳ ಮೇಲಾಗಲಿ ಅಥವಾ ಜಮ್ಮು-ಕಾಶ್ಮೀರದಲ್ಲಿ ಭಾರತ ಕೈಗೆತ್ತಿಕೊಳ್ಳುತ್ತಿರುವ ಜಲವಿದ್ಯುತ್ ಯೋಜನೆಗಳ ಮೇಲಾಗಲಿ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಗಡಿಯಲ್ಲಿನ ಭಯೋತ್ಪಾದನೆಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲವನ್ನು ವಿರೋಧಿಸಿ ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ತಡೆಹಿಡಿದಿದ್ದು, ಆ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಭಾರತ ಸರ್ಕಾರ ತಿಳಿಸಿದೆ.
ಮಧ್ಯಸ್ಥಿಕೆ ನ್ಯಾಯಾಲಯವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ, ಸಿಂಧೂ ಒಪ್ಪಂದವನ್ನು ಅಮಾನತುಗೊಳಿಸಲು ಭಾರತ ನೀಡಿದ ಕಾರಣಗಳನ್ನು ಪರಿಶೀಲಿಸಲಾಗಿದ್ದು, ಒಪ್ಪಂದವನ್ನು ರದ್ದುಗೊಳಿಸಲು ಅಥವಾ ಅಮಾನತುಗೊಳಿಸಲು ಈ ಕಾರಣಗಳು ಸಮರ್ಥನೀಯವಲ್ಲ ಎಂದು ಹೇಳಿದೆ. ಭಾರತವು ಒಪ್ಪಂದದ ನಿಯಮಗಳಿಗೆ ಬದ್ಧವಾಗಿರಬೇಕು ಮತ್ತು ಪಶ್ಚಿಮದ ನದಿಗಳಲ್ಲಿ ಜಲವಿದ್ಯುತ್ ಯೋಜನೆಗಳ ವಿನ್ಯಾಸ ಹಾಗೂ ಕಾರ್ಯಾಚರಣೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಬೇಕು ಎಂದು ಕೋರ್ಟ್ ತಿಳಿಸಿದೆ.