ನವದೆಹಲಿ, ಆ. 30 (DaijiworldNews/TA): ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 137ನೇ ಸಂಚಿಕೆಯಲ್ಲಿ ದೇಶದ ನವೀನ ಆಲೋಚನೆಗಳು, ಇತಿಹಾಸದ ಡಿಜಿಟಲೀಕರಣ, ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ, ಮಹಿಳಾ ಸಬಲೀಕರಣ ಹಾಗೂ ಕೃಷಿ ಕ್ಷೇತ್ರದ ಯಶೋಗಾಥೆಗಳನ್ನು ಹಂಚಿಕೊಂಡರು. ಈ ವೇಳೆ ಕರ್ನಾಟಕದ ಬೆಂಗಳೂರಿನ ನಿಂಗಮ್ಮ ಹಾಗೂ ಚಿಕ್ಕಮಗಳೂರಿನ ರೈತರ ಸಾಧನೆಗಳನ್ನೂ ವಿಶೇಷವಾಗಿ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂಬೈ ಮೂಲದ ಕೃಷ್ಣ ಶೇಷಾದ್ರಿ ಅವರು ಆರಂಭಿಸಿರುವ Bharat Rajya ವೆಬ್ಸೈಟ್ ಅನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಈ ಪೋರ್ಟಲ್ನಲ್ಲಿ ಯಾವುದೇ ವರ್ಷವನ್ನು ಆಯ್ಕೆ ಮಾಡಿದರೆ, ಆ ಕಾಲಘಟ್ಟದಲ್ಲಿ ಭಾರತದ ಯಾವ ಪ್ರದೇಶವನ್ನು ಯಾವ ರಾಜವಂಶ ಆಳುತ್ತಿತ್ತು ಎಂಬ ಐತಿಹಾಸಿಕ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಚೋಳರು, ಪಲ್ಲವರು ಸೇರಿದಂತೆ ವಿವಿಧ ರಾಜವಂಶಗಳ ಇತಿಹಾಸವನ್ನು ಡಿಜಿಟಲ್ ರೂಪದಲ್ಲಿ ಪರಿಚಯಿಸುವ ಈ ಪ್ರಯತ್ನವು ಯುವಜನರಿಗೆ ಭಾರತದ ಗತಕಾಲವನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಮೋದಿ ಹೇಳಿದರು.
ಇದೇ ವೇಳೆ ದೇಶದ ಯುವಜನತೆಯನ್ನು ಮಾದಕ ದ್ರವ್ಯ ವ್ಯಸನದಿಂದ ದೂರವಿಡುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ವಿಕಸಿತ ಭಾರತ ನಿರ್ಮಾಣಕ್ಕೆ ಮಾದಕ ದ್ರವ್ಯ ಮುಕ್ತ ಯುವಜನತೆ ಅತ್ಯಂತ ಮುಖ್ಯ ಎಂದರು. ಕಲಾವಿದರು, ಸಂಗೀತಗಾರರು, ವಿದ್ಯಾರ್ಥಿಗಳು ಹಾಗೂ ಕಂಟೆಂಟ್ ಕ್ರಿಯೇಟರ್ಗಳು ಪ್ರಭಾವಿ ಹಾಡುಗಳು, ಬೀದಿ ನಾಟಕಗಳು ಮತ್ತು ಆಕರ್ಷಕ ಘೋಷಣೆಗಳ ಮೂಲಕ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.
ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ಮೋದಿ, ‘ಪಿಎಂ ಸ್ವನಿಧಿ’ ಯೋಜನೆಯಡಿ ಸಾಲ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಬೆಂಗಳೂರಿನ ನಿಂಗಮ್ಮ ಅವರ ಯಶೋಗಾಥೆಯನ್ನು ಹಂಚಿಕೊಂಡರು. ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಈ ಯೋಜನೆಯ ಒಟ್ಟು ಫಲಾನುಭವಿಗಳಲ್ಲಿ ಸುಮಾರು ಶೇ.46ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರು ಸ್ವಾವಲಂಬಿಗಳಾಗಲು ಈ ಯೋಜನೆ ಹೇಗೆ ನೆರವಾಗುತ್ತಿದೆ ಎಂಬುದಕ್ಕೆ ನಿಂಗಮ್ಮ ಅವರ ಸಾಧನೆ ಉತ್ತಮ ಉದಾಹರಣೆ ಎಂದು ಪ್ರಧಾನಿ ಹೇಳಿದರು.
ಕರ್ನಾಟಕದ ಕೃಷಿ ಕ್ಷೇತ್ರದ ಸಾಧನೆಯನ್ನೂ ಮೋದಿ ‘ಮನ್ ಕಿ ಬಾತ್’ನಲ್ಲಿ ಪ್ರಸ್ತಾಪಿಸಿದರು. ಚಿಕ್ಕಮಗಳೂರಿನ ರೈತರು ಕಾಫಿ ಮತ್ತು ಕಾಳುಮೆಣಸಿನ ತೋಟಗಳ ನಡುವೆ ಪರ್ಯಾಯ ಬೆಳೆಯಾಗಿ ಅವಕಾಡೊ ಅಥವಾ ಬೆಣ್ಣೆಹಣ್ಣನ್ನು ಬೆಳೆಯುತ್ತಿದ್ದು, ಉತ್ತಮ ಆದಾಯ ಗಳಿಸುತ್ತಿರುವುದನ್ನು ಅವರು ಶ್ಲಾಘಿಸಿದರು. ಹೊಸ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿರುವುದು ದೇಶದ ಕೃಷಿ ಕ್ಷೇತ್ರದ ಬದಲಾವಣೆಗೆ ಉತ್ತಮ ಉದಾಹರಣೆ ಎಂದು ಹೇಳಿದರು.
ಇನ್ನು ಈ ಬಾರಿಯ ‘ಹರ್ ಘರ್ ತಿರಂಗಾ’ ಅಭಿಯಾನದ ಯಶಸ್ಸನ್ನೂ ಪ್ರಧಾನಿ ಮೋದಿ ಉಲ್ಲೇಖಿಸಿದರು. ದೇಶ-ವಿದೇಶಗಳಲ್ಲಿ ಭಾರತೀಯರು ತ್ರಿವರ್ಣ ಧ್ವಜದೊಂದಿಗೆ ಸಂಭ್ರಮಿಸಿದ್ದು, ಬರೋಬ್ಬರಿ 8 ಕೋಟಿ ಸೆಲ್ಫಿಗಳು ಅಪ್ಲೋಡ್ ಆಗಿವೆ ಎಂದು ಹೇಳಿದರು. ಫಿಜಿಯ ಸುವಾದಿಂದ ಅಮೆರಿಕ ಮತ್ತು ಯುರೋಪ್ವರೆಗೆ ತ್ರಿವರ್ಣ ಧ್ವಜ ರಾರಾಜಿಸಿರುವುದು ಭಾರತೀಯರ ದೇಶಭಕ್ತಿಯ ಪ್ರತೀಕವಾಗಿದೆ ಎಂದರು.
ಇದರ ಜೊತೆಗೆ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ 100 ವಿದ್ಯಾರ್ಥಿನಿಯರು ‘ಮಿಷನ್ ಶಕ್ತಿ ಸ್ಯಾಟ್’ ಅಡಿಯಲ್ಲಿ ಉಪಗ್ರಹವನ್ನು ಚಂದ್ರನ ಕಕ್ಷೆಗೆ ಕಳುಹಿಸಲು ಸಜ್ಜಾಗುತ್ತಿರುವುದನ್ನೂ ಪ್ರಧಾನಿ ಮೋದಿ ಹೆಮ್ಮೆಯಿಂದ ಪ್ರಸ್ತಾಪಿಸಿದರು. ದೇಶದ ಯುವಜನತೆ, ವಿಶೇಷವಾಗಿ ವಿದ್ಯಾರ್ಥಿನಿಯರು ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ತೋರಿಸುತ್ತಿರುವ ಆಸಕ್ತಿ ಭಾರತದ ಭವಿಷ್ಯದ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಒಟ್ಟಾರೆ, ಈ ಬಾರಿಯ ‘ಮನ್ ಕಿ ಬಾತ್’ನಲ್ಲಿ ಕರ್ನಾಟಕದ ಮಹಿಳಾ ಸಬಲೀಕರಣ ಮತ್ತು ಕೃಷಿ ಯಶೋಗಾಥೆ ಸೇರಿದಂತೆ ದೇಶದ ವಿವಿಧ ಭಾಗಗಳ ನವೀನ ಪ್ರಯತ್ನಗಳು, ಯುವಜನರ ಸಾಧನೆ ಹಾಗೂ ರಾಷ್ಟ್ರ ನಿರ್ಮಾಣದ ಚಟುವಟಿಕೆಗಳಿಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.