ಬೆಂಗಳೂರು, ಆ. 30 (DaijiworldNews/TA): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, “ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯು ಯಶಸ್ವಿಯಾಗಿ ಮೂರು ವರ್ಷ ಪೂರೈಸಿರುವುದು ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ಸಂಗತಿ” ಎಂದು ಹೇಳಿದ್ದಾರೆ. ನಾಡಿನ 1.2 ಕೋಟಿಗೂ ಹೆಚ್ಚು ಕುಟುಂಬಗಳ ಒಡತಿಯರಿಗೆ ಈ ಯೋಜನೆ ಆರ್ಥಿಕ ಬಲದ ಜೊತೆಗೆ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯವನ್ನು ತುಂಬಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
“ಇದು ಕೇವಲ ಸರ್ಕಾರಿ ಸೌಲಭ್ಯವಲ್ಲ. ಮಹಿಳೆಯರ ನೆಮ್ಮದಿಯ ಬದುಕಿಗೆ ಸರ್ಕಾರ ನೀಡುತ್ತಿರುವ ಪ್ರೀತಿಯ ಆಸರೆ” ಎಂದು ಅವರು ಬಣ್ಣಿಸಿದ್ದಾರೆ. ಇದೇ ವೇಳೆ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮನವಿ ಮಾಡಿರುವ ಡಿಕೆ ಶಿವಕುಮಾರ್, ಸರ್ಕಾರದ ಗ್ಯಾರಂಟಿ ಸಮಿತಿ ಸದಸ್ಯರು ಮನೆ ಬಾಗಿಲಿಗೆ ಭೇಟಿ ನೀಡಿದಾಗ ಅಗತ್ಯ ದಾಖಲೆಗಳನ್ನು ನೀಡಿ ಎಂದಿನಂತೆ ಸಹಕರಿಸುವಂತೆ ಕೋರಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಒತ್ತು ನೀಡುತ್ತಿದ್ದು, ಯೋಜನೆಯ ಮುಂದಿನ ಹಂತಗಳಲ್ಲೂ ಫಲಾನುಭವಿಗಳ ಸಹಕಾರ ಅಗತ್ಯ ಎಂದು ಅವರು ತಿಳಿಸಿದ್ದಾರೆ.