ಮುಂಬೈ, ಆ. 30 (DaijiworldNews/TA): ಅಡುಗೆಮನೆಯಲ್ಲಿ ಪ್ರತಿದಿನ ಬಳಸುವ ಮಸಾಲೆ ಪದಾರ್ಥಗಳ ಗುಣಮಟ್ಟದ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿದೆ. ಪ್ರಸಿದ್ಧ ಬ್ರ್ಯಾಂಡ್ಗಳಾದ ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ ಹಾಗೂ ಲಾಲ್ಜೀ ಗೋಧೂ ಆ್ಯಂಡ್ ಕಂಪನಿ (LG) ತಯಾರಿಸುವ ಇಂಗು ಸೇರಿದಂತೆ ಕೆಲವು ಮಸಾಲೆ ಉತ್ಪನ್ನಗಳಲ್ಲಿ ನಿಯಮ ಉಲ್ಲಂಘನೆ ಮತ್ತು ಗುಣಮಟ್ಟದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕಠಿಣ ಕ್ರಮ ಕೈಗೊಂಡಿದೆ.

ಗ್ರಾಹಕರಿಂದ ಬಂದ ದೂರುಗಳ ಆಧಾರದ ಮೇಲೆ ಮುಂಬೈ ಮತ್ತು ಗುಜರಾತ್ನಲ್ಲಿ ನಡೆಸಿದ ಜಂಟಿ ತಪಾಸಣೆ ಹಾಗೂ ಪ್ರಯೋಗಾಲಯ ಪರೀಕ್ಷೆಯಲ್ಲಿ ಹಲವು ಅಂಶಗಳು ನಿಯಮಾನುಸಾರ ಇಲ್ಲದಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದೆ. ನಿಯಮಗಳ ಪ್ರಕಾರ ಕಂಪೌಂಡೆಡ್ ಇಂಗಿನಲ್ಲಿ ಕನಿಷ್ಠ 5% ಆಲ್ಕೋಹಾಲ್ ಸೋಲ್ಯುಬಲ್ ಎಕ್ಸ್ಟ್ರಾಕ್ಟ್ ಇರಬೇಕಿದೆ. ಆದರೆ ಪರೀಕ್ಷೆಗೊಳಪಡಿಸಿದ ಎವರೆಸ್ಟ್ ಮತ್ತು ಎಲ್ಜಿ ಬ್ರ್ಯಾಂಡ್ಗಳ ಕೆಲವು ಇಂಗು ಮಾದರಿಗಳಲ್ಲಿ ಈ ಪ್ರಮಾಣ 0%ರಿಂದ 3%ರವರೆಗೆ ಮಾತ್ರ ಕಂಡುಬಂದಿದೆ ಎಂದು ವರದಿಯಾಗಿದೆ. ಇದರಿಂದ ಉತ್ಪನ್ನದಲ್ಲಿ ಅಸಲಿ ಇಂಗಿನ ಪ್ರಮಾಣ ಹಾಗೂ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಪರೀಕ್ಷೆಯ ವೇಳೆ ಎವರೆಸ್ಟ್ ಕಂಪನಿಯ ಎಗ್ ಕರಿ ಮಸಾಲೆ, ಚಿಕನ್ ಮಸಾಲೆ ಮತ್ತು ಗರಂ ಮಸಾಲೆ ಉತ್ಪನ್ನಗಳಲ್ಲೂ ಗುಣಮಟ್ಟ ಹಾಗೂ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಅಂಶಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಇನ್ನು ಎಲ್ಜಿ ಬ್ರ್ಯಾಂಡ್ನ ಕಚ್ಚಾ ಇಂಗಿನಲ್ಲೂ ಪಿಷ್ಟದ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚಿನ ಮಟ್ಟದಲ್ಲಿ ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಎಫ್ಎಸ್ಎಸ್ಎಐ, ಸಂಬಂಧಿತ ಕಂಪನಿಗಳಿಗೆ ಮಾರುಕಟ್ಟೆಯಲ್ಲಿರುವ ನಿಯಮಬಾಹಿರ ಮತ್ತು ಕಳಪೆ ಗುಣಮಟ್ಟದ ಉತ್ಪನ್ನಗಳ ಬ್ಯಾಚ್ಗಳನ್ನು ಹಿಂಪಡೆಯುವಂತೆ ಸೂಚಿಸಿದೆ. ಅಲ್ಲದೆ, ಉತ್ಪನ್ನಗಳ ಮಾರಾಟಕ್ಕೆ ನಿಷೇಧಾತ್ಮಕ ಕ್ರಮ ಕೈಗೊಂಡು, ಗುಣಮಟ್ಟ ಸುಧಾರಣೆಗೆ ಸಂಬಂಧಿಸಿದ ಸಮಗ್ರ ಆಕ್ಷನ್ ಪ್ಲಾನ್ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ಪ್ರತಿದಿನದ ಅಡುಗೆಯಲ್ಲಿ ಬಳಸುವ ಮಸಾಲೆ ಪದಾರ್ಥಗಳ ಗುಣಮಟ್ಟದ ಬಗ್ಗೆ ಈ ಬೆಳವಣಿಗೆ ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಬ್ರ್ಯಾಂಡ್ ಹೆಸರು ನೋಡಿ ಉತ್ಪನ್ನ ಖರೀದಿಸುವುದಕ್ಕಿಂತ, ಪ್ಯಾಕಿಂಗ್, FSSAI ವಿವರ, ಬ್ಯಾಚ್ ಸಂಖ್ಯೆ ಮತ್ತು ಗುಣಮಟ್ಟದ ಮಾಹಿತಿಯನ್ನು ಪರಿಶೀಲಿಸುವುದು ಅಗತ್ಯ ಎಂಬ ಸಂದೇಶವನ್ನೂ ಈ ಪ್ರಕರಣ ನೀಡಿದೆ.