ನವದೆಹಲಿ, ಆ. 25 (DaijiworldNews/AA): ಸೆಪ್ಟೆಂಬರ್ 12 ಮತ್ತು 13 ರಂದು ನವದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು 400 ಅಧಿಕಾರಿಗಳೊಂದಿಗೆ ಭಾರತಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.

ಕ್ಸಿ ಜಿನ್ಪಿಂಗ್ ಅವರ ಪ್ರವಾಸವನ್ನು ಚೀನಾ ವಿದೇಶಾಂಗ ಸಚಿವಾಲಯ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಒಂದು ವೇಳೆ ಈ ಭೇಟಿ ಅಧಿಕೃತವಾಗಿ ಖಚಿತವಾದರೆ, 2020ರ ಗಾಲ್ವಾನ್ ಕಣಿವೆ ಸಂಘರ್ಷದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹಳಸಿದ ನಂತರ ಹಾಗೂ ಕಳೆದ ಏಳು ವರ್ಷಗಳಲ್ಲೇ ಕ್ಸಿ ಜಿನ್ಪಿಂಗ್ ಕೈಗೊಳ್ಳುತ್ತಿರುವ ಮೊದಲ ಭಾರತ ಪ್ರವಾಸ ಇದಾಗಲಿದೆ.
ಕ್ಸಿ ಜಿನ್ಪಿಂಗ್ ಅವರು ಬೃಹತ್ ನಿಯೋಗದೊಂದಿಗೆ ಶೃಂಗಸಭೆಗೆ ಆಗಮಿಸುವ ಸಾಧ್ಯತೆಯಿದೆ. ಈ ನಿಯೋಗದಲ್ಲಿ ಸುಮಾರು 400 ಅಧಿಕಾರಿಗಳು ಇರಲಿದ್ದು, ಇದು 2019ರ ಭಾರತ ಭೇಟಿಯ ನಿಯೋಗಕ್ಕಿಂತ ದುಪ್ಪಟ್ಟು ಗಾತ್ರದ್ದಾಗಿರಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಮಾಲೋಚನೆಗಳು ತೀವ್ರಗೊಂಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
“ನಾವು ಬ್ರಿಕ್ಸ್ ಸಹಕಾರಕ್ಕೆ ಸದಾ ಹೆಚ್ಚಿನ ಮಹತ್ವ ನೀಡುತ್ತೇವೆ. ಭಾರತ ಆಯೋಜಿಸುತ್ತಿರುವ ಈ ಬಾರಿಯ ಶೃಂಗಸಭೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಮತ್ತು ಶೃಂಗಸಭೆ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ” ಎಂದು ಚೀನಾ ತಿಳಿಸಿದೆ.