ನವದೆಹಲಿ, ಆ. 24 (DaijiworldNews/AA): 8-9 ದೇಶಗಳು ಮತ್ತು ಗುಂಪುಗಳೊಂದಿಗೆ ಒಪ್ಪಂದಕ್ಕಾಗಿ ಮಾತುಕತೆಗಳು ಚಾಲನೆಯಲ್ಲಿದೆ. ಇನ್ನೂ ಹಲವು ದೇಶಗಳ ಜೊತೆ ಮಾತುಕತೆಗಳು ನಡೆಯುತ್ತಿವೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಜಪಾನ್ನಲ್ಲಿ ನಡೆದ ಭಾರತ ಮತ್ತು ಜಪಾನ್ ವ್ಯಾಪಾರ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಈ ಒಪ್ಪಂದಗಳ ಬಳಿಕ ಭಾರತಕ್ಕೆ ವಿಶ್ವದ ಶೇ. 75ರಷ್ಟು ಮಾರುಕಟ್ಟೆ ಪ್ರವೇಶ ಸಿಗುತ್ತದೆ. ಭಾರತವು ಪ್ರಸ್ತುತ ಕನಿಷ್ಠ 8 ರಿಂದ 9 ದೇಶಗಳ ಗುಂಪುಗಳು ಮತ್ತು ಪ್ರತ್ಯೇಕ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳ ಕುರಿತು ಮಾತುಕತೆ ನಡೆಸುತ್ತಿದೆ. ಈ ದೇಶಗಳು ಒಟ್ಟಾರೆಯಾಗಿ ಸುಮಾರು 15 ಟ್ರಿಲಿಯನ್ ಡಾಲರ್ಗಳಷ್ಟು ಜಿಡಿಪಿ ಹೊಂದಿವೆ" ಎಂದು ಮಾಹಿತಿ ನೀಡಿದರು
"ಕಳೆದ ನಾಲ್ಕು ವರ್ಷಗಳಲ್ಲಿ ಭಾರತವು ಒಟ್ಟು 60 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ದೇಶಗಳೊಂದಿಗೆ 9 ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಇದರೊಂದಿಗೆ ಜಪಾನ್, ಕೊರಿಯಾ ಮತ್ತು ಆಸಿಯಾನ್ (ASEAN) ಪ್ರದೇಶದ ಹಿಂದಿನ ಒಪ್ಪಂದಗಳು ಮತ್ತೊಂದು 10 ಟ್ರಿಲಿಯನ್ ಡಾಲರ್ ಜಿಡಿಪಿಯನ್ನು ತೆರೆದಿವೆ" ಎಂದು ಹೇಳಿದರು.
"ಪ್ರಸ್ತುತ ಭಾರತವು ಒಟ್ಟು 70 ಟ್ರಿಲಿಯನ್ ಡಾಲರ್ಗಳಷ್ಟು ಮಾರುಕಟ್ಟೆಗೆ ಆದ್ಯತೆಯ ಪ್ರವೇಶವನ್ನು ಮುಕ್ತಗೊಳಿಸಿದೆ. ಹೊಸ ಒಪ್ಪಂದಗಳು ಅಂತಿಮಗೊಂಡರೆ, ಜಾಗತಿಕ ವಾಣಿಜ್ಯದ ಸುಮಾರು ಶೇ. 75ರಷ್ಟು ಭಾಗವು ಮುಕ್ತ ವ್ಯಾಪಾರ ಒಪ್ಪಂದಗಳ ವ್ಯಾಪ್ತಿಗೆ ಬರಲಿದೆ. ಭಾರತದಲ್ಲಿ ಡಾಟಾ ಸೆಂಟರ್ಗಳು, ಉತ್ಪಾದನಾ ವಲಯ ಮತ್ತು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಹೂಡಿಕೆಗೆ ಅವಕಾಶಗಳಿವೆ " ಎಂದರು.