ಜೈಪುರ, ಆ. 24 (DaijiworldNews/AA): ಕೇರಳ ಮೂಲದ 19 ವರ್ಷದ ಯುವತಿ ಕಾಜಿಯಾ ಲಿಜ್ ಮೆಜೊ ಅವರು 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ರಾಜಸ್ಥಾನದ ಜೈಪುರದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ 52 ಸ್ಪರ್ಧಿಗಳನ್ನು ಹಿಂದಿಕ್ಕಿ ಕಾಜಿಯಾ ಲಿಜ್ ಮೆಜೊ ಅವರು ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಆಗಿ ಹೊರಹೊಮ್ಮಿದ್ದಾರೆ. ಅವರು ಈ ಪ್ರತಿಷ್ಠಿತ ಕಿರೀಟ ಗೆದ್ದ ಕೇರಳದ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಂಬರುವ ನವೆಂಬರ್ ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕಾಜಿಯಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಕೇರಳದ ಮಾವೇಲಿಕ್ಕರ ಮೂಲದ ಕಾಜಿಯಾ ಅವರು ಪ್ರಸ್ತುತ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ. 2007ರಲ್ಲಿ ಜನಿಸಿದ ಇವರು ಅಬುಧಾಬಿಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ್ದಾರೆ. 17ನೇ ವಯಸ್ಸಿನಲ್ಲಿ ‘ಮಿಸ್ ಟೀನ್ ದಿವ್ಯಾ 2024’ ಗೆದ್ದಿದ್ದ ಇವರು, ‘ಮಿಸ್ ಟೀನ್ ಇಂಟರ್ನ್ಯಾಷನಲ್ 2025’ರಲ್ಲಿ ರನ್ನರ್ ಅಪ್ ಆಗಿದ್ದರು. ಈ ವರ್ಷ ‘ಮಿಸ್ ಯೂನಿವರ್ಸ್ ಕೇರಳ 2026’ ಕಿರೀಟ ಧರಿಸಿದ ಕಿರಿಯ ಸ್ಪರ್ಧಿ ಎಂದು ಇತಿಹಾಸ ನಿರ್ಮಿಸಿದ್ದಾರೆ.
ಮಾಡೆಲಿಂಗ್ ಜೊತೆಗೆ ಕಾಜಿಯಾ 12 ವರ್ಷಗಳ ಕಾಲ ಶಾಸ್ತ್ರೀಯ ನೃತ್ಯ ತರಬೇತಿ ಪಡೆದಿದ್ದಾರೆ. ಜೊತೆಗೆ ಗಾಯನ, ಡ್ರಮ್ಸ್ ಹಾಗೂ ವಯಲಿನ್ ನುಡಿಸುವುದರಲ್ಲೂ ಪರಿಣತಿ ಹೊಂದಿದ್ದಾರೆ.