ಬೆಂಗಳೂರು, ಆ. 24 (DaijiworldNews/AK):ಭ್ರಷ್ಟ ಸಚಿವ ನಾಗೇಂದ್ರರ ರಾಜೀನಾಮೆ ಪಡೆಯದೇ ವಿಪಕ್ಷಗಳನ್ನೇ ಟೀಕಿಸುವ ಮುಖ್ಯಮಂತ್ರಿಗಳೇ ಗೂಂಡಾ ಸಂಸ್ಕøತಿ ಉಳ್ಳವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ಬಿಜೆಪಿ ವತಿಯಿಂದ ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಖಂಡರು ಮತ್ತು ಕಾರ್ಯಕರ್ತರು ಮುಂದಾದರು. ಈ ಸಂದರ್ಭದಲ್ಲಿ ಮುಖಂಡರು ಮತ್ತು ಹಲವಾರು ಕಾರ್ಯಕರ್ತರನ್ನು ಬಂಧಿಸಲಾಯಿತು. ಮುಖ್ಯಮಂತ್ರಿಗಳು ಯಾವ ರೀತಿ ಗೂಂಡಾಗಿರಿ ಮಾಡಿದ್ದಾರೆಂದು ರಾಜ್ಯದ ಜನರಿಗೆ ಮತ್ತು ಬೆಂಗಳೂರಿನ ಜನತೆಗೆ ಗೊತ್ತಿದೆ ಎಂದು ವಿಜಯೇಂದ್ರ ಅವರು ಇದೇವೇಳೆ ಮಾಧ್ಯಮಗಳಿಗೆ ತಿಳಿಸಿದರು.
ನಮ್ಮ ಹೋರಾಟ ಹತ್ತಿಕ್ಕಲು ಹೋಗದಿರಿ; ಸದನ ಮುಗಿದ ನಂತರವೂ ನಮ್ಮ ಹೋರಾಟ ಮುಂದುವರೆಯುತ್ತ್ತದೆ ಎಂದು ತಿಳಿಸಿದರು. ಬಿಜೆಪಿ ಮತ್ತು ಜೆಡಿಎಸ್ ವತಿಯಿಂದ ದಲಿತರ ಪರವಾಗಿ ಮತ್ತು ಧ್ವನಿ ಇಲ್ಲದವರ ಧ್ವನಿಯಾಗಿ ಹೋರಾಟ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಹೋರಾಟ ಇಲ್ಲಿಗೇ ನಿಲ್ಲದು ಎಂದು ಎಚ್ಚರಿಸಿದರು. ಮುಖ್ಯಮಂತ್ರಿಗಳು ನಮ್ಮನ್ನು ಗೂಂಡಾಗಳೆಂದು ಕರೆದಿದ್ದಾರೆ.
ಡಿ.ಕೆ.ಶಿವಕುಮಾರ್ ಅವರೇ, ನೀವು ಗೂಂಡಾಗಳು ಎಂದು ಟೀಕಿಸಿದರು. ಇದು ನಾಗೇಂದ್ರ ಒಬ್ಬರ ಪ್ರಶ್ನೆಯಲ್ಲ; ದಲಿತರ ಹಣ ಕೊಳ್ಳೆ ಹೊಡೆದ ಸಚಿವರನ್ನು ದಲಿತರ ಹೆಸರು ಹೇಳಿಕೊಂಡು ರಕ್ಷಣೆ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಭ್ರಷ್ಟಾಚಾರ ಮಾಡುವುದು ಎಷ್ಟು ಅಪರಾಧವೋ ಭ್ರಷ್ಟರನ್ನು ಬೆಂಬಲಿಸುವುದು ಮಹಾ ಅಪರಾಧ ಎಂದು ಆರೋಪಿಸಿದರು. ಕಾಂಗ್ರೆಸ್ಸಿಗೆ ನಾಗೇಂದ್ರ ವಿಚಾರದಲ್ಲಿ ಭಯವೇಕೆ ಎಂದು ಅವರು ಪ್ರಶ್ನಿಸಿದರು.
ಬಿಜೆಪಿ ವತಿಯಿಂದ ಹೋರಾಟ ಮುಂದುವರೆಯಲಿದೆ. ಸದನದಲ್ಲಿ ನಾವು ಈಗಾಗಲೇ ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟ ಸದನದ ಹೊರಗಡೆಯೂ ನಡೆಯುತ್ತಿದೆ ಎಂದು ಅವರು ತಿಳಿಸಿದರು.