ಬೆಂಗಳೂರು, ಆ. 24 (DaijiworldNews/AA): ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳನ್ನು ಬ್ಯಾನ್ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸಚಿವ ಯು.ಟಿ. ಖಾದರ್ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ಕೃತಕ ಪನ್ನೀರ್ ನಿಷೇಧದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೃತಕ ಪನ್ನೀರ್ ಮಾತ್ರವಲ್ಲದೆ, ಎಲ್ಲಾ ರೀತಿಯ ಕೃತಕ ಉತ್ಪನ್ನಗಳ ಬಳಕೆಯನ್ನು ನಿಷೇಧಿಸಲಾಗಿದೆ. ಆಯುಕ್ತರಿಗೆ ಒಂದು ವರ್ಷದವರೆಗೆ ಮಾತ್ರ ನಿಷೇಧಿಸುವ ಅಧಿಕಾರವಿದೆ" ಎಂದರು.
"ಶಾಶ್ವತ ನಿಯಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಪ್ರತಿ ವರ್ಷವೂ ಈ ಕುರಿತು ಆದೇಶಗಳನ್ನು ಹೊರಡಿಸುವ ಬದಲು, ಬಲವಾದ ಮತ್ತು ಶಾಶ್ವತ ನಿಯಮಗಳು ಬೇಕು" ಎಂದು ಹೇಳಿದರು.
ಹಣ್ಣುಗಳಿಗೆ ರಾಸಾಯನಿಕಗಳ ಬಳಕೆ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ ಅವರು, "ಬಾಳೆಹಣ್ಣು, ಸಪೋಟ, ಮಾವಿನ ಹಣ್ಣು ಸೇರಿದಂತೆ ಹಲವು ಹಣ್ಣುಗಳನ್ನು ರಾಸಾಯನಿಕ ಬಳಸಿ ಮಾಗಿಸುತ್ತಿರುವುದನ್ನು ತಡೆಯಬೇಕಿದೆ" ಎಂದು ತಿಳಿಸಿದರು.