ಚೆನ್ನೈ, ಆ. 24 (DaijiworldNews/AA): ʻಅನ್ನಪೂರ್ಣಿ ಸೂಪರ್ ಸಿಕ್ಸ್ʼ ಯೋಜನೆ ಹೆಸರಿನಲ್ಲಿ ತಮಿಳುನಾಡು ಜನರಿಗೆ ವರ್ಷಕ್ಕೆ ಮೂರು ಎಲ್ಪಿಜಿ ಸಿಲಿಂಡರ್ ಉಚಿತವಾಗಿ ನೀಡುವುದಾಗಿ ಸಿಎಂ ವಿಜಯ್ ಸರ್ಕಾರ ಘೋಷಿಸಿದೆ.

ವಾರ್ಷಿಕ 2.5 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಈ ಯೋಜನೆ ಅನ್ವಯ ಆಗಲಿದೆ. ಈ ಯೋಜನೆಯಿಂದ 1.30 ಕೋಟಿ ಕುಟುಂಬಗಳಿಗೆ ಸಹಾಯವಾಗಲಿದೆ. ಅಂದಾಜು 4000 ಕೋಟಿ ರೂ. ಹಣ ಈ ಯೋಜನೆಗೆ ಬೇಕಾಗುತ್ತದೆ.
ಈ ಯೋಜನೆ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ವಿಜಯ್, "ಈ ಯೋಜನೆಯು ವಾರ್ಷಿಕ ಆದಾಯ 2.5 ಲಕ್ಷ ರೂ. ಮೀರದ ಕುಟುಂಬಗಳು, ಆರ್ಥಿಕವಾಗಿ ದುರ್ಬಲ ವರ್ಗಗಳು, ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳು ಮತ್ತು ಅಂಗವಿಕಲ ವ್ಯಕ್ತಿಗಳ ಕುಟುಂಬಗಳನ್ನು ಒಳಗೊಳ್ಳುತ್ತದೆ. ಅಡುಗೆ ಅನಿಲ ಸಿಲಿಂಡರ್ನ ವೆಚ್ಚವನ್ನು ಮರುಪಾವತಿಸಲಾಗುತ್ತದೆ. ಕಂಪನಿಗಳಿಂದ ಅಧಿಕೃತ ಬಿಲ್ಲಿಂಗ್ ಆಧಾರದ ಮೇಲೆ ಬುಕಿಂಗ್ ಮತ್ತು ವಿತರಣೆಯ ನಂತರ ಕುಟುಂಬದ ಯಜಮಾನಿ ಬ್ಯಾಂಕ್ ಖಾತೆಗೆ ನೇರವಾಗಿ ಯೋಜನೆಯ ಹಣ ಜಮಾ ಮಾಡಲಾಗುತ್ತದೆ" ಎಂದು ಮಾಹಿತಿ ನೀಡಿದರು.
"ಕೊಲ್ಲಿ ರಾಷ್ಟ್ರಗಳ ಸಂಘರ್ಷದ ಪರಿಣಾಮವಾಗಿ ಅನಿಲ ಪೂರೈಕೆ ಅಡಚಣೆಗಳು ಮತ್ತು ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಕಳೆದ ನಾಲ್ಕು ತಿಂಗಳಲ್ಲಿ ಕುಟುಂಬಗಳ ಮೇಲೆ ತೀವ್ರ ಆರ್ಥಿಕ ಹೊರೆ ಹೆಚ್ಚಾಗಿದೆ. ಇದರಿಂದಾಗಿ ಅನೇಕ ಕುಟುಂಬಗಳು ಪರ್ಯಾಯ ಇಂಧನಗಳತ್ತ ಮುಖ ಮಾಡಿವೆ. ಇದನ್ನು ಪರಿಗಣಿಸಿ ʻಅನ್ನಪೂರ್ಣಿ ಸೂಪರ್ ಸಿಕ್ಸ್ʼ ಯೋಜನೆ ಜಾರಿಗೆ ತರುತ್ತಿದ್ದೇವೆ" ಎಂದು ಅವರು ತಿಳಿಸಿದರು.