ಚಂಡೀಗಢ, ಆ. 24 (DaijiworldNews/AA): ಟಿಫಿನ್ ಬಾಕ್ಸ್ನಲ್ಲಿ ಅಡಗಿಸಿಟ್ಟಿದ್ದ ಶಂಕಿತ ಐಇಡಿ ಮತ್ತು ಮಾರಕಾಸ್ತ್ರಗಳೊಂದಿಗೆ ಪಂಜಾಬ್ ಮೂಲದ ಮೂವರು ಶಂಕಿತ ಉಗ್ರರನ್ನು ಚಂಡೀಗಢ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪಂಜಾಬ್ನ ಲವ್ಪ್ರೀತ್ ಸಿಂಗ್ (19), ಜಶನ್ಪ್ರೀತ್ ಸಿಂಗ್ (21) ಮತ್ತು ಪ್ರಭ್ಪ್ರೀತ್ ಸಿಂಗ್ (19) ಎಂದು ಗುರುತಿಸಲಾಗಿದೆ.
ಸೆಕ್ಟರ್ 43 ರ ಅಂತಾರಾಜ್ಯ ಬಸ್ ಟರ್ಮಿನಲ್ ಹಿಂಭಾಗದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಟಿಫಿನ್ ಬಾಕ್ಸ್ನಲ್ಲಿ ಅಡಗಿಸಿಟ್ಟಿದ್ದ ಶಂಕಿತ ಐಇಡಿ ಹಾಗೂ ಮಾರಕಾಸ್ತ್ರಗಳೊಂದಿಗೆ ಪಂಜಾಬ್ ಮೂಲದ ಮೂವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಸುಮಾರು 5 ಕೆಜಿ ಜೆಲಾಟಿನ್ ಕಡ್ಡಿಗಳು, ಡಿಟೋನೇಟರ್, ರಿಮೋಟ್ ಕಂಟ್ರೋಲ್ ಚಾಲಿತ ವ್ಯವಸ್ಥೆ, ಒಂದು ಪಿಸ್ತೂಲ್, ಮ್ಯಾಗಜೀನ್ ಹಾಗೂ 5 ಜೀವಂತ ಗುಂಡುಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಆರೋಪಿಗಳು ವಿದೇಶದಲ್ಲಿರುವ ಬಿಕೆಐ ಕಮಾಂಡರ್ ಸತ್ನಾಮ್ ಅಲಿಯಾಸ್ ಸತ್ತಾ ನೌಶೇರಾ ಸೂಚನೆಯಂತೆ ಚಂಡೀಗಢದ ಪ್ರಮುಖ ಸ್ಥಳಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು. ಇದೀಗ ಪೊಲೀಸರು ಈ ಬೃಹತ್ ಸಂಚನ್ನು ವಿಫಗೊಳಿಸಿದ್ದಾರೆ.
ಘಟನೆಯ ಬೆನ್ನಲ್ಲೇ ಚಂಡೀಗಢ, ಮೊಹಾಲಿ ಮತ್ತು ಪಂಚಕುಲದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದೊಂದಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸ್ಫೋಟಕಗಳ ಮೂಲ ಮತ್ತು ಜಾಲದಲ್ಲಿರುವ ಇತರ ಸಹಚರರ ಪತ್ತೆಗಾಗಿ ಪೊಲೀಸರು ಬಿಎನ್ಎಸ್, ಸ್ಫೋಟಕ ಕಾಯ್ದೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.