ನವದೆಹಲಿ, ಆ. 23 (DaijiworldNews/AA): ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಅವರು ಸೋಮವಾರ ಚೀನಾದ ರಾಜಧಾನಿ ಬೀಜಿಂಗ್ಗೆ ಭೇಟಿ ನೀಡಲಿದ್ದು, ಚೀನಾದ ವಾಂಗ್ ಯೀ ಅವರೊಂದಿಗೆ ಭಾರತ – ಚೀನಾ ಗಡಿ ಸಮಸ್ಯೆಗಳ ಕುರಿತು ವಿಶೇಷ ಪ್ರತಿನಿಧಿಗಳ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮುಂಬರುವ ಸೆಪ್ಟೆಂಬರ್ 12-13 ರಂದು ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭಾರತಕ್ಕೆ ಆಗಮಿಸಿಸಲಿದ್ದಾರೆ. ಅದಕ್ಕೂ ಮುನ್ನ ನಡೆಯಲಿರುವ ಈ ಗಡಿ ಸಮಸ್ಯೆ ಕುರಿತ ಮಾತುಕತೆ ಅತ್ಯಂತ ಮಹತ್ವದ್ದಾಗಿವೆ.
ಭಾರತ ಮತ್ತು ಚೀನಾ ವಾಸ್ತವ ನಿಯಂತ್ರಣ ರೇಖೆಯ (LAC) ಉದ್ದಕ್ಕೂ ಉದ್ವಿಗ್ನತೆ ಕಡಿಮೆ ಮಾಡಲು ಮತ್ತು ಮಿಲಿಟರಿ ಮುಖಾಮುಖಿ ಕಡಿಮೆ ಮಾಡಲು ನಿರಂತರ ಪ್ರಯತ್ನಗಳು ನಡೆಯುತ್ತಲೇ ಇವೆ. 2020ರ ಜೂನ್ನಲ್ಲಿ ನಡೆದ ಗಾಲ್ವಾನ್ ಘರ್ಷಣೆಯ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದು, ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಲೇ ಇದೆ.
ಪ್ರಸ್ತುತ ಪೂರ್ವ ಲಡಾಖ್ನಲ್ಲಿ ಭಾರತ ಮತ್ತು ಚೀನಾ ಹೆಚ್ಚಿನ ಸಂಖ್ಯೆಯ ಸೈನಿಕರು ಮತ್ತು ಮಿಲಿಟರಿ ಸೌಲಭ್ಯಗಳನ್ನ ನಿಯೋಜಿಸಿದೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶೇಷ ಪ್ರತಿನಿಧಿಗಳ ಮಾತುಕತೆ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ.