ಬೆಂಗಳೂರು, ಆ. 23 (DaijiworldNews/TA): ಸಾಹಿತ್ಯ ಸೇವೆಗೆ ವಯಸ್ಸಿನ ಯಾವುದೇ ನಿರ್ಬಂಧವಿಲ್ಲ ಎಂಬುದಕ್ಕೆ ಶತಾಯುಷಿ ವಿದ್ವಾನ್ ಬಿ. ಚಂದ್ರಯ್ಯ ಅವರು ಚಾವುಂಡರಾಯ ದತ್ತಿ ಪ್ರಶಸ್ತಿಗೆ ಭಾಜನರಾಗಿರುವುದೇ ಸಾಕ್ಷಿ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಪದ್ಮರಾಜ ನೇಮಿಚಂದ್ರ ದೇಸಾಯಿ ಹೇಳಿದರು.

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬೆಂಗಳೂರಿನ ಶ್ರೀ ಕೃಷ್ಣ ರಾಜ ಪರಿಷತ್ತಿನ ಮಂದಿರದಲ್ಲಿ ನಡೆದ ಚಾವುಂಡರಾಯ ದತ್ತಿ ಹಾಗೂ ಡಾ. ಸಿದ್ಧಲಿಂಗಯ್ಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚೀನ ಜೈನ ಸಾಹಿತ್ಯವನ್ನು ಆಧರಿಸಿ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕೃತಿ ರಚನೆ ಮಾಡಿದ ಸಾಧನೆಗಾಗಿ 2024ನೇ ಸಾಲಿನ ರಾಜ್ಯಮಟ್ಟದ ಚಾವುಂಡರಾಯ ಪ್ರಶಸ್ತಿಯನ್ನು ಹಿರಿಯ ಸಾಹಿತಿ, ಶತಾಯುಷಿ ವಿದ್ವಾನ್ ಬಿ. ಚಂದ್ರಯ್ಯ ಅವರಿಗೆ ಪ್ರದಾನ ಮಾಡಲಾಯಿತು. 2025ನೇ ಸಾಲಿನ ಪ್ರಶಸ್ತಿಯನ್ನು ವಿಜಯಪುರದ ಡಿ.ಎನ್. ಅಕ್ಕಿ ಅವರಿಗೆ ನೀಡಲಾಯಿತು. ಇಬ್ಬರಿಗೂ ನಗದು ಗೌರವ ಸಹಿತ ಪ್ರಶಸ್ತಿ ಪ್ರದಾನ ನಡೆಯಿತು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಹಿರಿಯ ಸಾಹಿತಿ ಹಾಗೂ ಸಂಶೋಧಕ ಡಾ. ಹೆಚ್.ಆರ್. ಸ್ವಾಮಿ ಅವರಿಗೆ ಡಾ. ಸಿದ್ಧಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿದ್ವಾನ್ ಬಿ. ಚಂದ್ರಯ್ಯ, ಜೀವನದ ನೂರನೇ ವಯಸ್ಸಿನಲ್ಲಿ ಸಾಹಿತ್ಯ ಸೇವೆಗಾಗಿ ಚಾವುಂಡರಾಯ ಪ್ರಶಸ್ತಿಯಂತಹ ಪ್ರತಿಷ್ಠಿತ ಗೌರವ ದೊರೆತಿರುವುದು ಸಾರ್ಥಕ ಭಾವ ಮೂಡಿಸಿದೆ ಎಂದರು. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಖಾದಿ ಕಮಿಶನ್ ಉದ್ಯೋಗಿಯಾಗಿದ್ದಾಗ ತಾವು ರಚಿಸಿದ್ದ ‘ಉದಯವಾಯಿತು ಒಂದು ಗೂಡಿತು ಹರಿದ ಹಿರಿಮೆಯ ಕನ್ನಡ’ ಎಂಬ ಆಶಯ ಗೀತೆಯನ್ನು ಹಾಡಿದರು. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುನ್ನಾ ದಿನವೇ ತಮ್ಮ ಪತ್ನಿ ಸರೋಜಿನಿ ನಿಧನರಾಗಿರುವ ನೋವನ್ನೂ ಹಂಚಿಕೊಂಡ ಅವರು, ಈ ಗೌರವದಿಂದ ಸಂತಸಗೊಂಡಿದ್ದ ಪತ್ನಿಯ ಆಶಯವನ್ನು ಪ್ರಶಸ್ತಿ ಸ್ವೀಕರಿಸುವ ಮೂಲಕ ಪೂರೈಸಿದ ಸಂತಸವಿದೆ ಎಂದು ಭಾವುಕರಾದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ. ರಾಜಪ್ಪ ದಳವಾಯಿ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು. ಅಜಲು ಪದ್ಧತಿ ನಿಷೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಿದ್ಧಲಿಂಗಯ್ಯ ಅವರ ಬದುಕು ಒಂದು ‘ಸಾಹಸ ಗೀತೆ’ಯಂತಿದೆ ಎಂದು ಅವರು ಬಣ್ಣಿಸಿದರು.
ಗಮಕಿ ವಿದ್ವಾಂಸ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರು ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಟ್ಟರು. ರತ್ನಾಕರವರ್ಣಿಯ ‘ಭರತೇಶ ವೈಭವ’ ಕೃತಿಯನ್ನು ಆಧರಿಸಿ ಚಂದ್ರಯ್ಯ ಅವರು ಭಾಮಿನಿ ಷಟ್ಪದಿಯಲ್ಲಿ ‘ಭರತೇಶ ವೈಭವಾಮೃತ’ ರೂಪದಲ್ಲಿ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅನನ್ಯವಾಗಿದೆ ಎಂದು ಹೇಳಿದರು. ಇಳಿವಯಸ್ಸಿನಲ್ಲೂ ಅವರು ಮುಂದುವರಿಸುತ್ತಿರುವ ಸಾಹಿತ್ಯ ಸೇವೆ ಎಲ್ಲರಿಗೂ ಮಾದರಿ ಎಂದರು.
ದತ್ತಿ ದಾನಿ, ವಿಶ್ರಾಂತ ಪತ್ರಿಕಾ ಸಂಪಾದಕ ಹಾಗೂ ಸಾಹಿತಿ ಡಾ. ಪದ್ಮರಾಜ ದಂಡಾವತಿ ಮಾತನಾಡಿ, ಚಂದ್ರಯ್ಯ ಅವರನ್ನು ತಡವಾಗಿಯಾದರೂ ಗುರುತಿಸಿ ಗೌರವಿಸಲಾಗುತ್ತಿರುವುದು ಸಂತಸದ ಸಂಗತಿ ಎಂದರು. ದತ್ತಿ ದಾನಿ ಶ್ರೀಮತಿ ರಮಾಕುಮಾರಿ ಸಿದ್ದಲಿಂಗಯ್ಯ ಅವರು ಮಾನವ ಧರ್ಮ ಹಾಗೂ ಮಾನವೀಯತೆಯ ಸಾಧಕರನ್ನು ಗುರುತಿಸಿ ಸಿದ್ಧಲಿಂಗಯ್ಯ ದತ್ತಿ ಪ್ರಶಸ್ತಿ ನೀಡುವ ಆಶಯವನ್ನು ವಿವರಿಸಿದರು.
ಪ್ರಶಸ್ತಿ ಪುರಸ್ಕೃತರಾದ ಡಿ.ಎನ್. ಅಕ್ಕಿ ಹಾಗೂ ಡಾ. ಹೆಚ್.ಆರ್. ಸ್ವಾಮಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪರಿಷತ್ ಆಡಳಿತಾಧಿಕಾರಿ ಕೆ.ಎ. ದಯಾನಂದ (ಐಎಎಸ್) ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶ್ರೀಮತಿ ಶಾಂತಕುಮಾರಿ ಕೆ.ಆರ್. ಸ್ವಾಗತಿಸಿದರು. ಚಂದನ ವಾಹಿನಿಯ ಧನಂಜಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವಿದ್ವಾನ್ ಬಿ. ಚಂದ್ರಯ್ಯ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸಿದ ಮೂಡುಬಿದಿರೆಯ ಶ್ರೀ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅವರು ಚಂದ್ರಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೈನ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿ ಪ್ರತಿಷ್ಠಿತ ಚಾವುಂಡರಾಯ ಪ್ರಶಸ್ತಿಗೆ ಭಾಜನರಾದ ಚಂದ್ರಯ್ಯ ಅವರನ್ನು ಪ್ರಶಸ್ತಿ ಪ್ರದಾನಕ್ಕೂ ಮುನ್ನ ಬೆಂಗಳೂರಿನ ಅವರ ನಿವಾಸಕ್ಕೆ ತೆರಳಿ ಶ್ರೀಗಳು ಗೌರವಿಸಿದ್ದರು. ಇದೇ ಸಂದರ್ಭದಲ್ಲಿ ಚಂದ್ರಯ್ಯ ಅವರು ಶ್ರೀ ಮಠದ ‘ವಿವೇಕಾಭ್ಯುದಯ’ ಮಾಸಿಕದ ಸಂಪಾದಕರಾಗಿ ದೀರ್ಘಕಾಲ ಸಲ್ಲಿಸಿದ ಸೇವೆಯನ್ನು ಶ್ರೀಗಳು ಸ್ಮರಿಸಿದರು.