ಭುವನೇಶ್ವರ, ಆ. 23 (DaijiworldNews/TA): ಒಡಿಶಾ ಕರಾವಳಿಯ ಬಂಗಾಳ ಕೊಲ್ಲಿಯಲ್ಲಿ 24 ಸಿಬ್ಬಂದಿಯನ್ನು ಹೊತ್ತ ಪನಾಮಾ ಧ್ವಜದ ಸರಕು ಹಡಗು ಮುಳುಗಡೆಯಾಗಿದ್ದು, 22 ಮಂದಿ ನಾಪತ್ತೆಯಾಗಿದ್ದಾರೆ. ಭಾರತೀಯ ಕರಾವಳಿ ಪಡೆ ಮತ್ತು ಭಾರತೀಯ ನೌಕಾಪಡೆ ಜಂಟಿಯಾಗಿ ಬೃಹತ್ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಇದುವರೆಗೆ ಇಬ್ಬರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ.

‘ಎಂವಿ ಓಷನ್ ವಿನ್ನರ್’ ಎಂಬ ಸರಕು ಹಡಗಿನಲ್ಲಿ 20 ಚೀನಾ ಪ್ರಜೆಗಳು, 3 ಮ್ಯಾನ್ಮಾರ್ ಪ್ರಜೆಗಳು ಹಾಗೂ ಓರ್ವ ಬಾಂಗ್ಲಾದೇಶದ ಪ್ರಜೆ ಸೇರಿದಂತೆ ಒಟ್ಟು 24 ಮಂದಿ ಸಿಬ್ಬಂದಿ ಇದ್ದರು. ಹಡಗಿನೊಂದಿಗೆ ಸಂಪರ್ಕ ಕಡಿತಗೊಂಡ ಬಳಿಕ ಅದು ಒಡಿಶಾದ ಪಾರಾದೀಪ್ ಕರಾವಳಿಯಿಂದ ಸುಮಾರು 240 ನಾಟಿಕಲ್ ಮೈಲಿ ದೂರದಲ್ಲಿ ಮುಳುಗಿರುವುದು ದೃಢಪಟ್ಟಿದೆ.
ಕಬ್ಬಿಣದ ಅದಿರು ಸಾಗಿಸುತ್ತಿದ್ದ ಈ ಹಡಗು ಶುಕ್ರವಾರ ಒಡಿಶಾ ಕರಾವಳಿಯಿಂದ ಸಿಂಗಾಪುರದತ್ತ ಪ್ರಯಾಣ ಬೆಳೆಸಿತ್ತು. ಮಾರ್ಗಮಧ್ಯೆ ಹಡಗಿನೊಂದಿಗೆ ಸಂಪರ್ಕ ಕಡಿತಗೊಂಡಿರುವ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಬಳಿಕ ಹಡಗು ಮುಳುಗಿರುವುದು ಖಚಿತವಾಗಿದೆ.
ಹಡಗಿನಲ್ಲಿದ್ದ ಇಬ್ಬರು ಸಿಬ್ಬಂದಿಯನ್ನು ಭಾರತೀಯ ಕರಾವಳಿ ಪಡೆ ರಕ್ಷಿಸಿದೆ. ಉಳಿದ 22 ಮಂದಿಯ ಸುಳಿವಿಗಾಗಿ ಸಮುದ್ರದಲ್ಲಿ ನಿರಂತರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಹಡಗು ಮುಳುಗಡೆಯಾದ ಮಾಹಿತಿ ಲಭ್ಯವಾಗುತ್ತಿದ್ದಂತೆ ಭಾರತೀಯ ಕರಾವಳಿ ಪಡೆ ಮತ್ತು ಭಾರತೀಯ ನೌಕಾಪಡೆ ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಇಳಿದಿವೆ. ಘಟನಾ ಸ್ಥಳದ ಸುತ್ತಮುತ್ತ ಸಂಚರಿಸುತ್ತಿದ್ದ ವಾಣಿಜ್ಯ ಹಡಗುಗಳಿಗೂ ಮುನ್ನೆಚ್ಚರಿಕೆ ನೀಡಲಾಗಿದ್ದು, ನಾಪತ್ತೆಯಾದ ಸಿಬ್ಬಂದಿಯ ಶೋಧ ಮತ್ತು ರಕ್ಷಣಾ ಕಾರ್ಯಕ್ಕೆ ನೆರವಾಗುವಂತೆ ಸೂಚಿಸಲಾಗಿದೆ. ಪ್ರತಿಕೂಲ ಸಮುದ್ರ ಪರಿಸ್ಥಿತಿಯ ನಡುವೆಯೂ ರಕ್ಷಣಾ ತಂಡಗಳು ಕಾರ್ಯಾಚರಣೆ ಮುಂದುವರಿಸಿದ್ದು, ನಾಪತ್ತೆಯಾದ 22 ಮಂದಿ ಸಿಬ್ಬಂದಿಯ ಪತ್ತೆಗಾಗಿ ವ್ಯಾಪಕ ಶೋಧ ನಡೆಸಲಾಗುತ್ತಿದೆ.