ಕೊಡಗು, ಆ. 22 (DaijiworldNews/AK): ಪ್ರಕೃತಿ ಸೌಂದರ್ಯವನ್ನು ಅಸ್ವಾದಿಸಲು ಕೊಡಗಿಗೆ ಆಗಮಿಸಿದ್ದ ಪ್ರವಾಸಿಗರೊಬ್ಬರು ಕಾಡಾನೆ ದಾಳಿಗೆ ಸಿಲುಕಿ ದುರಂತ ಅಂತ್ಯ ಕಂಡಿರುವ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದಲ್ಲಿ ನಡೆದಿದೆ.

ಬೆಂಗಳೂರು ಮೂಲದ ಮುರಳಿಕೃಷ್ಣ (43) ಮೃತ ದುರ್ದೈವಿ. ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಜೆಯ ಮಜಾ ಕಳೆಯಲು ಬೆಂಗಳೂರಿನಿಂದ ಆಗಮಿಸಿದ್ದ ಮುರಳಿಕೃಷ್ಣ ತೆರಾಲು ಗ್ರಾಮದ ಹೋಂಸ್ಟೇ ಒಂದರಲ್ಲಿ ಉಳಿದುಕೊಂಡಿದ್ದರು. ಮುಂಜಾನೆ ನಿಸರ್ಗದ ಸವಿಯನ್ನು ಆಸ್ವಾದಿಸುತ್ತಾ ವಾಯುವಿಹಾರಕ್ಕೆ (ವಾಕಿಂಗ್) ತೆರಳಿದ್ದ ವೇಳೆ, ಎದುರಾದ ಒಂಟಿ ಸಲಗ ಏಕಾಏಕಿ ಇವರ ಮೇಲೆ ದಾಳಿ ಮಾಡಿದೆ. ಕಾಡಾನೆ ದಾಳಿಗೆ ಸಿಲುಕಿದ ಮುರಳಿಕೃಷ್ಣ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಹಾಗೂ ಪೊಲೀಸರು ಪರಿಶೀಲನೆ ಮಾಡಿದರು. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶ್ರೀಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ತೀವ್ರ ಆತಂಕ ಮೂಡಿಸಿದೆ.