ನವದೆಹಲಿ, ಆ. 22 (DaijiworldNews/AA): 1988ರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 105 ವರ್ಷದ ರಸಿಕ್ ಚಂದ್ರ ಮಂಡಲ್ ಅವರಿಗೆ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ಮನ್ನಾ ಮಾಡಿ ಮಹತ್ವದ ಆದೇಶ ಹೊರಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಹಾಗೂ ವಿ. ಮೊಹನಾ ಅವರಿದ್ದ ಪೀಠವು, ವೃದ್ಧಾಪ್ಯ ಹಾಗೂ ಆರೋಗ್ಯ ಸಮಸ್ಯೆಗಳನ್ನು ಪರಿಗಣಿಸಿದ ನ್ಯಾಯಾಲಯ, ಉಳಿದಿರುವ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿ ಅವರನ್ನು ಮತ್ತೆ ಜೈಲಿಗೆ ಕಳುಹಿಸದಂತೆ ಆದೇಶಿಸಿದೆ.
ಪೀಠವು 2024ರಲ್ಲಿ ನೀಡಿದ್ದ ಮಧ್ಯಂತರ ಜಾಮೀನು ಆದೇಶವನ್ನು ಅಂತಿಮಗೊಳಿಸಿತು. ಜೀವಾವಧಿ ಶಿಕ್ಷೆ ಪೂರ್ಣಗೊಂಡಿಲ್ಲದಿದ್ದರೂ ಅವರನ್ನು ಮತ್ತೆ ಬಂಧನಕ್ಕೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಪೀಠ ತಿಳಿಸಿದೆ.
ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯ ನಿವಾಸಿ ರಸಿಕ್ ಚಂದ್ರ ಮಂಡಲ್ ಅವರು ತಮ್ಮ ಸಹೋದರ ಸುರೇಶ್ ಮಂಡಲ್ ಅವರ ಹತ್ಯೆ ಮಾಡಿದ ಆರೋಪ ಅವರ ಮೇಲಿತ್ತು. 1994ರಲ್ಲಿ ವಿಚಾರಣಾ ನ್ಯಾಯಾಲಯ ಅವರನ್ನು ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಮಂಡಲ್ ಅವರು ಸುಮಾರು 32 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದರು. 2018ರಲ್ಲಿ ಕಲ್ಕತ್ತಾ ಹೈಕೋರ್ಟ್ ಅವರ ಶಿಕ್ಷೆ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿತ್ತು. ಬಳಿಕ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದದ್ದು, ಅಲ್ಲಿ ಕೂಡ ಮನವಿ ತಿರಸ್ಕೃತವಾಗಿತ್ತು.
2020ರಲ್ಲಿ 99 ವರ್ಷದವರಾಗಿದ್ದ ಮಂಡಲ್ ಅವರು ವಯಸ್ಸು ಹಾಗೂ ವಯೋಸಹಜ ಕಾಯಿಲೆಗಳನ್ನು ಉಲ್ಲೇಖಿಸಿ ಅವಧಿಪೂರ್ವ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. 2024ರ ನವೆಂಬರ್ 29ರಂದು ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು/ಪೆರೋಲ್ ನೀಡಿತ್ತು. ಇದೀಗ ಆ ಆದೇಶವನ್ನು ಅಂತಿಮಗೊಳಿಸುವ ಮೂಲಕ ಉಳಿದ ಶಿಕ್ಷೆಯಿಂದ ಮನ್ನಾ ಮಾಡಲಾಗಿದೆ.