ಗದಗ, ಆ. 22 (DaijiworldNews/AA): ಗಡಿ ರಸ್ತೆಗಳ ಸಂಸ್ಥೆ(ಬಿಆರ್ಒ) ಅಡಿಯ 'ಪ್ರಾಜೆಕ್ಟ್ ಚೇತಕ್'ನ ೪೫ ಟಾಸ್ಕ್ ಫೋರ್ಸ್ನ ಪ್ರಥಮ ಮಹಿಳಾ ಕಮಾಂಡರ್ ಆಗಿ ಭಾರತೀಯ ಸೇನೆಯ ಕರ್ನಲ್ ಸ್ಫೂರ್ತಿ ಕುಲಕರ್ಣಿ ಅವರು ನೇಮಕಗೊಂಡಿದ್ದಾರೆ.

1989ರ ಮೇ 26ರಂದು ಜನಿಸಿದ ಸ್ಫೂರ್ತಿ ಕುಲಕರ್ಣಿ, ಅವರು ಕರ್ನಾಟಕದ ಗದಗ ಜಿಲ್ಲೆಯ ಹೊಂಬಳ ಗ್ರಾಮದವರು. ಅವರು ರಂಗನಾಥ ಕುಲಕರ್ಣಿ ಮತ್ತು ಗೀತಾ ದಂಪತಿಯ ಹಿರಿಯ ಪುತ್ರಿ. ಅವರ ಕಿರಿಯ ಸಹೋದರಿ ಸಂಪ್ರಿತಾ ಕುಲಕರ್ಣಿ ಕೂಡ ಭಾರತೀಯ ಸೇನೆಯಲ್ಲಿ ಮೇಜರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸ್ಫೂರ್ತಿ ಅವರು ಗದಗದ ತೋಂಟದಾರ್ಯ, ಸೇಂಟ್ ಜಾನ್ಸ್ ಹಾಗೂ ವಿದ್ಯಾದಾನ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು. 2003ರಲ್ಲಿ ತಾಯಿ ನಿಧನರಾದ ಬಳಿಕ ತಂದೆ ರಂಗನಾಥ ಕುಲಕರ್ಣಿ ಅವರೇ ಮಕ್ಕಳನ್ನು ಬೆಳೆಸಿದರು.
ಪುಣೆಯಲ್ಲಿ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ಸ್ಫೂರ್ತಿ, ಬಾಗಲಕೋಟೆಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದರು. ಬಳಿಕ ಎಸ್ಎಸ್ಬಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2011ರಲ್ಲಿ ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆಗೆ ಸೇರ್ಪಡೆಗೊಂಡರು.
ಸ್ಫೂರ್ತಿ ಅವರು ಭಾರತದ ಪಶ್ಚಿಮ ಗಡಿಯಲ್ಲಿ ಕಾರ್ಯತಂತ್ರದ ರಸ್ತೆ ಸಂಪರ್ಕವನ್ನು ಅಭಿವೃದ್ಧಿಪಡಿಸುವುದು ಮತ್ತು ನಿರ್ವಹಿಸುವ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಸಮರ್ಪಣೆ, ಧೈರ್ಯ ಹಾಗೂ ದೃಢಸಂಕಲ್ಪದಿಂದ ಭಾರತೀಯ ಸೇನೆಯಲ್ಲಿ ವಿಶಿಷ್ಟ ಹಾದಿ ನಿರ್ಮಿಸುವ ಮೂಲಕ ಸೇನೆ ಸೇರಬಯಸುವ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ.