ತಿರುವಣ್ಣಾಮಲೈ, ಆ. 21 (DaijiworldNews/TA): ತಮಿಳುನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುವಣ್ಣಾಮಲೈ ಅಣ್ಣಾಮಲೈಯರ್ (ಅರುಣಾಚಲಂ) ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ದೇವಾಲಯ ಆಡಳಿತ ಮಂಡಳಿ ಮಹತ್ವದ ಸೂಚನೆ ನೀಡಿದೆ. ಸೆಪ್ಟೆಂಬರ್ 1ರಿಂದ ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಲಾಗಿದೆ.

ದೇವಾಲಯದ ಪಾವಿತ್ರ್ಯವನ್ನು ಕಾಪಾಡುವುದು ಹಾಗೂ ಗರ್ಭಗುಡಿ ಸೇರಿದಂತೆ ದೇವಾಲಯದೊಳಗೆ ಫೋಟೋ, ವಿಡಿಯೋ ಮತ್ತು ರೀಲ್ಸ್ ಚಿತ್ರೀಕರಣವನ್ನು ತಡೆಯುವುದು ಈ ನಿರ್ಧಾರದ ಪ್ರಮುಖ ಉದ್ದೇಶವಾಗಿದೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ದೇವಾಲಯದ ಆಗಮ ಸಂಪ್ರದಾಯಗಳನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ.
ದರ್ಶನದ ಸಂದರ್ಭದಲ್ಲಿ ಭಕ್ತರು ಮೊಬೈಲ್ ಅಥವಾ ಕ್ಯಾಮೆರಾ ಬಳಸುವುದರಿಂದ ಸಮಯ ವ್ಯರ್ಥವಾಗುವುದರ ಜೊತೆಗೆ ಇತರ ಭಕ್ತರ ದರ್ಶನಕ್ಕೂ ಅಡ್ಡಿಯಾಗಬಹುದು. ಹೀಗಾಗಿ ದೇವಾಲಯದ ಒಳಗೆ ಮೊಬೈಲ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲು ನಿರ್ಧರಿಸಲಾಗಿದೆ.
ಸೆಲೆಬ್ರಿಟಿಗಳು ಹಾಗೂ ವಿಐಪಿಗಳು ದೇವಾಲಯಕ್ಕೆ ಭೇಟಿ ನೀಡುವ ಸಂದರ್ಭದಲ್ಲೂ ಫೋಟೋ ಮತ್ತು ವಿಡಿಯೋ ಚಿತ್ರೀಕರಣದ ಮೇಲೆ ನಿರ್ಬಂಧ ಇರಲಿದೆ. ವಿಐಪಿ ಭೇಟಿಯ ಮಾಹಿತಿ ಮುಂಚಿತವಾಗಿ ನೀಡುವಂತೆ ಸೂಚಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ದೇವಾಲಯದ ಪ್ರಮುಖ ಗೋಪುರಗಳ ಬಳಿ ವಿಶೇಷ ಮೊಬೈಲ್ ಭದ್ರತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ರಾಜಗೋಪುರ (ಪೂರ್ವ ಭಾಗ) : 2 ಭದ್ರತಾ ಕೇಂದ್ರಗಳು
ಅಮ್ಮನ್ ಗೋಪುರ (ಉತ್ತರ ಭಾಗ): 2 ಭದ್ರತಾ ಕೇಂದ್ರಗಳು
ತಿರುಮಂಜನ ಗೋಪುರ (ದಕ್ಷಿಣ ಭಾಗ): 1 ಭದ್ರತಾ ಕೇಂದ್ರ
ಭಕ್ತರು ಪ್ರತಿ ಮೊಬೈಲ್ ಫೋನ್ಗೆ ರೂ.5 ಶುಲ್ಕ ಪಾವತಿಸಿ ಟೋಕನ್ ಪಡೆದು ತಮ್ಮ ಫೋನ್ ಅನ್ನು ಭದ್ರತಾ ಕೇಂದ್ರದಲ್ಲಿ ಹಸ್ತಾಂತರಿಸಬಹುದು. ದರ್ಶನ ಮುಗಿದ ಬಳಿಕ ಟೋಕನ್ ತೋರಿಸಿ ಮೊಬೈಲ್ನ್ನು ಮರಳಿ ಪಡೆಯಬಹುದು.
ದೇವಾಲಯದ ಆವರಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ಇರಿಸಲಾಗುತ್ತದೆ. ನಿಷೇಧದ ನಡುವೆಯೂ ಮೊಬೈಲ್ ಫೋನ್ನ್ನು ದೇವಾಲಯದೊಳಗೆ ಕೊಂಡೊಯ್ದು ಬಳಸುವುದು ಕಂಡುಬಂದರೆ, ಫೋನ್ನ್ನು ವಶಪಡಿಸಿಕೊಂಡು ಪೊಲೀಸರಿಗೆ ಹಸ್ತಾಂತರಿಸಲಾಗುವುದು. ಅಲ್ಲದೆ, ನಿಯಮ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ 1ರಿಂದ ಜಾರಿಯಾಗಲಿರುವ ಈ ಹೊಸ ನಿಯಮದಿಂದ ದೇವಾಲಯದ ಪಾವಿತ್ರ್ಯ ಹಾಗೂ ಶಿಸ್ತು ಕಾಪಾಡುವ ಜೊತೆಗೆ ಭಕ್ತರಿಗೆ ಸುಗಮ ದರ್ಶನಕ್ಕೆ ಅನುಕೂಲವಾಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.