ಬೆಂಗಳೂರು, ಆ. 18 (DaijiworldNews/AK): ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಇವತ್ತು ಸದನದಲ್ಲಿ ಚರ್ಚೆ ಆಗಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರಗಾಲ ಸೇರಿದಂತೆ ಕೆಪಿಎಸ್ಸಿ ಹಗರಣದ ವಿಚಾರ, ಇತರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕೆಂಬ ಇಚ್ಛಾಶಕ್ತಿ ರಾಜ್ಯ ಸರಕಾರಕ್ಕೆ, ಮುಖ್ಯಮಂತ್ರಿಗಳಿಗೆ ಇದ್ದರೆ ಮುಲಾಜಿಲ್ಲದೇ ನಾಗೇಂದ್ರರನ್ನು ತಕ್ಷಣ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದರು.
ಸದನದಲ್ಲಿ ನಾಗೇಂದ್ರರ ವಿಚಾರ ಚರ್ಚಿಸಬೇಕೆಂಬ ಮಾತನ್ನು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಆದರೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ನಾಗೇಂದ್ರರ ಹಗರಣದ ವಿಚಾರ ಇದೇ ಸದನದಲ್ಲಿ ಈ ಹಿಂದೆ ಸಮಗ್ರ ಚರ್ಚೆ ಆಗಿದೆ. ನಂತರದಲ್ಲೇ ನಾಗೇಂದ್ರರ ರಾಜೀನಾಮೆ ಪಡೆಯಲಾಗಿತ್ತು ಎಂದು ಗಮನಕ್ಕೆ ತಂದರು.
ನಾಗೇಂದ್ರರ ಕುರಿತು ಚರ್ಚೆಗೆ ಏನೂ ಉಳಿದಿಲ್ಲ ಎಂದ ಅವರು, ಭಂಡತನ ಬಿಟ್ಟು ಮುಖ್ಯಮಂತ್ರಿಗಳು ನಾಗೇಂದ್ರರನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಬರಗಾಲ, ಕೆಪಿಎಸ್ಸಿ, ಬಿಡದಿ ಟೌನ್ಶಿಪ್, ನೈಸ್ ವಿಚಾರಗಳು ಸೇರಿ ಎಲ್ಲ ವಿಚಾರಗಳಿಗೆ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು.