ಚೆನ್ನೈ,ಆ. 17 (DaijiworldNews/AK): ಜೂನ್ ತಿಂಗಳಲ್ಲಿ ಬಿಜೆಪಿಯನ್ನು ತೊರೆದ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ತಮ್ಮ ನಿರ್ಧಾರಕ್ಕೆ ಕಾರಣವೇನೆಂದು ಸುಳಿವು ನೀಡಿದ್ದಾರೆ.

ಐದಾರು ವರ್ಷಗಳಿಂದ ಬಿಜೆಪಿಯಲ್ಲಿದ್ದು, ತಮಿಳುನಾಡಿನ ಭವಿಷ್ಯದ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿದ್ದ, ಮತ್ತು ತಮಿಳುನಾಡಿನಲ್ಲಿ ಬಿಜೆಪಿಗೆ ಶೇ. 10ಕ್ಕಿಂತಲೂ ಹೆಚ್ಚು ಮತಗಳು ಸಿಗುವಂತೆ ಮಾಡಿದ್ದ ಅಣ್ಣಾಮಲೈ ಅವರು ಪಕ್ಷದ ಧೋರಣೆ ಬಗ್ಗೆ ಅಸಮಾಧಾನಗೊಂಡು ನಿರ್ಗಮಿಸಿದ್ದಾರೆ.
ಇಂಡಿಯಾ ಟುಡೆ ತಮಿಳುನಾಡು ಸಮಾವೇಶದಲ್ಲಿ ಮಾತನಾಡುತ್ತಾ ಅವರು, ಬಿಜೆಪಿಯ ಕೇಂದ್ರ ನಾಯಕತ್ವದ ಧೋರಣೆ ಬಗ್ಗೆ ವರ್ಷಗಳಿಂದ ಇದ್ದ ಬೇಸರವು ಗಟ್ಟಿಗೊಂಡು ಪಕ್ಷ ತೊರೆಯುವಂತೆ ಮಾಡಿತು ಎಂದಿದ್ದಾರೆ.
ಭಾರತದ ಅಭಿವೃದ್ಧಿಯು ಕೇವಲ ಗುಜರಾತ್ ಒಂದಕ್ಕೇ ಸೀಮಿತವಾಗಿರಬಾರದು ಎಂದು ಅಣ್ಣಾಮಲೈ ಹೇಳಿದ್ದಾರೆ. “ಎಲ್ಲಾ ಎಐ (AI) ಕಂಪನಿಗಳು, ಚಿಪ್/ಸೆಮಿಕಂಡಕ್ಟರ್ ತಯಾರಿಕಾ ಘಟಕಗಳು, 2030ರ ಕಾಮನ್ವೆಲ್ತ್ ಕ್ರೀಡಾಕೂಟ ಮತ್ತು 2036ರ ಒಲಿಂಪಿಕ್ಸ್ನಂತಹ ಬೃಹತ್ ಯೋಜನೆಗಳು ಕೇವಲ ಗುಜರಾತ್ಗೆ ಹೋಗುವುದನ್ನು ಒಪ್ಪಲು ಸಾಧ್ಯವಿಲ್ಲ. ಭಾರತದ ಅಭಿವೃದ್ಧಿ ಮಾದರಿ ಬದಲಾಗಬೇಕು,” ಎಂದು ಅವರು ಪ್ರತಿಪಾದಿಸಿದ್ದಾರೆ.
ಬಿಜೆಪಿಯ ನಿರ್ಧಾರಗಳು ದಿನದಿಂದ ದಿನಕ್ಕೆ ‘ದೆಹಲಿ-ಕೇಂದ್ರಿತ’ (ಕೇಂದ್ರೀಕೃತ) ಆಗುತ್ತಿರುವುದು ದುರದೃಷ್ಟಕರ. ಪಕ್ಷದ ವಿಕೇಂದ್ರೀಕರಣವಾಗಬೇಕು ಮತ್ತು ರಾಜ್ಯ ಮಟ್ಟದ ನಾಯಕರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.