ಬೆಂಗಳೂರು, ಆ. 17 (DaijiworldNews/AK): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಕುರಿತು ನಾನು ಸಚಿವರಿಗೆ ಪ್ರಶ್ನೆ ಹಾಕಿದ್ದು, 89 ಕೋಟಿ 62 ಲಕ್ಷ ಹಣ ವಿವಿಧ ಬ್ಯಾಂಕ್ ಖಾತೆಗಳಿಗೆ ಹೋಗಿದೆ ಎಂದು ಸರಕಾರವು ಉತ್ತರದಲ್ಲಿ ಒಪ್ಪಿಕೊಂಡಿರುವುದಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದ್ದ ಮೂವರಲ್ಲಿ ಕದ್ದವರು ಯಾರು ಎಂದು ಕನ್ನಡದ ಗಾದೆಯನ್ನು ಉಲ್ಲೇಖಿಸಿದರು. ನಾಗೇಂದ್ರ, ಅಂದಿನ ಎಂ.ಡಿ, ಸೇರಿ 14 ಜನರ ಮೇಲೆ ಮೊಕದ್ದಮೆ ದಾಖಲಾಗಿದೆ. 13ನೇ ಆರೋಪಿ ಸತ್ಯನಾರಾಯಣ ವರ್ಮ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿ, ನಾಗೇಂದ್ರ ಮತ್ತು ಅವರ ಕಡೆಯಿಂದ ನನಗೆ ಜೀವ ಬೆದರಿಕೆ ಇದೆ; ಸಚಿವರ ಹೆಸರು ಹೊರಬರಬಾರದೆಂದು ಅವರ ಒತ್ತಡ ಇದೆ ಎಂದು ತಿಳಿಸಿದ್ದರೆಂದು ಹೇಳಿದರು.
ಸರಕಾರ ನೇಮಿಸಿದ ವಿಶೇಷ ತನಿಖಾ ದಳದ ತನಿಖೆಯಲ್ಲಿ (ಎಸ್ಐಟಿ) ಹಣ ದುರುಪಯೋಗ ಸಾಬೀತಾಗಿದೆ. ಅವರಿನ್ನೂ ಪೂರ್ಣ ಆರೋಪಪಟ್ಟಿ ಸಲ್ಲಿಸಿಲ್ಲ. ಮತ್ತೆ ಅದೇ ಭ್ರಷ್ಟನನ್ನು ಸಚಿವರನ್ನಾಗಿ ಮಾಡಿದ್ದರ ಉದ್ದೇಶ ಏನು? ಎಂದು ಕೇಳಿದರು. ಈ ಹಣ ತೆಲಂಗಾಣ ಚುನಾವಣೆಗೆ ಬಳಕೆ ಆಗಿದೆ. ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಅಳಿಯನ ಚುನಾವಣೆಗೂ ಕೊಡುಗೆಯಾಗಿ ಈ ಹಣ ಹೋಗಿದೆ. ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ ಆಗಿದೆ. ಬ್ರಾಂಡಿ ಅಂಗಡಿ, ಜುವೆಲ್ಲರಿ ಅಂಗಡಿ, ಕಾರ್ ಷೋರೂಮಿಗೂ ಹೋಗಿದೆ. ರಾತ್ರಿ ಕಳ್ಳನನ್ನು ಹಿಡಿದು ಹಗಲು ಮತ್ತೆ ಸಚಿವರನ್ನಾಗಿ ಮಾಡುವುದಾದರೆ ಈ ಹಗರಣದಲ್ಲಿ ಕಾಂಗ್ರೆಸ್ ಪಾರ್ಟಿ ಮತ್ತು ಅವರ ಹೈಕಮಾಂಡ್ ಷಾಮೀಲಾಗಿದೆ. ನಾಗೇಂದ್ರ, ಹೈಕಮಾಂಡ್ ಹೆಸರು ಬಾಯಿ ಬಿಡುವ ಭಯದಿಂದ ‘ನೀನು ನನ್ನನ್ನು ರಕ್ಷಿಸಿದರೆ ನಾನು ಸಚಿವನಾಗಿ ಮಾಡುತ್ತೇನೆ’ ಎಂಬ ಕಂಡಿಷನ್ ಅಡಿಯಲ್ಲಿ ಸಚಿವ ಸ್ಥಾನ ಲಭಿಸಿದೆ ಎಂದು ಆರೋಪಿಸಿದರು.
ಭ್ರಷ್ಟ ಸಚಿವನ ವಜಾಕ್ಕೆ ಆಗ್ರಹಿಸಿ ಹೋರಾಟ
ಈ ಮೂಲಕ ಪರಿಶಿಷ್ಟ ಪಂಗಡಕ್ಕೆ ದ್ರೋಹ ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಅದಕ್ಕಾಗಿ ನಾವು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯವರ ನೇತೃತ್ವದಲ್ಲಿ ಸದನದಲ್ಲಿ ಹೋರಾಟ ಮಾಡಿದ್ದೇವೆ. ಭ್ರಷ್ಟ ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿದ್ದೇವೆ. ವಜಾ ಮಾಡುವವರೆಗೆ ಕಲಾಪದಲ್ಲಿ ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದೇವೆ ಎಂದು ವಿವರಿಸಿದರು.
ಸಚಿವರು ತಮ್ಮ ಉತ್ತರದಲ್ಲಿ ಹಣ ಎಲ್ಲೆಲ್ಲಿಗೆ ಹೋಗಿದೆ ಎಂದು ವಿವರ ನೀಡಿದ್ದಾರೆ ಎಂದರು. ಹಣ ಇನ್ನೂ ಪೂರ್ಣ ಪ್ರಮಾಣದಲ್ಲಿ ರಿಕವರಿ ಆಗಿಲ್ಲ ಎಂದ ಅವರು, ಆರೋಪಿ ನೆಕ್ಕುಂಟಿ ನಾಗರಾಜ್ ಮತ್ತು ನಾಗೇಂದ್ರ ಒಟ್ಟಿಗೆ ಹೋಟೆಲಿನಲ್ಲಿ ನಡೆಸಿದ ಸಭೆ ಕುರಿತು ಪ್ರಸ್ತಾಪಿಸಿದ್ದೆ. ಅಲ್ಲಿ ಮೌಖಿಕವಾಗಿ ಅಧಿಕಾರಿಗಳಿಗೆ ಸಹಕರಿಸಲು ಕೊಟ್ಟ ಸೂಚನೆ ಕುರಿತು ಫೋಟೊ ಬಿಡುಗಡೆ ಮಾಡಿದ್ದೆ ಎಂದು ತಿಳಿಸಿದರು.