ನವದೆಹಲಿ, ಆ. 17 (DaijiworldNews/AA): ಸ್ವಾತಂತ್ರ್ಯ ದಿನಾಚರಣೆಯ ಮುನ್ನ ದೇಶದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನ ಮೂಲದ, ಐಎಸ್ಐ ಬೆಂಬಲಿತ ಶಹಜಾದ್ ಭಟ್ಟಿ ನೆಟ್ವರ್ಕ್ ವಿರುದ್ಧ ಭದ್ರತಾ ಸಂಸ್ಥೆಗಳು ಬಹುರಾಜ್ಯ ಕಾರ್ಯಾಚರಣೆ ನಡೆಸಿವೆ. ಈ ಕಾರ್ಯಾಚರಣೆ ವೇಳೆ 14 ರಾಜ್ಯಗಳಿಂದ 253 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಕರ್ನಾಟಕದಲ್ಲಿ ಮೂವರು ಸೇರಿದಂತೆ 14 ರಾಜ್ಯಗಳಲ್ಲಿ ಒಟ್ಟು 253 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಯಲ್ಲಿ ಕರ್ನಾಟಕ ಮತ್ತು ದೆಹಲಿಯಲ್ಲಿ ಹೊಸ ಎಫ್ಐಆರ್ಗಳನ್ನೂ ದಾಖಲಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.
ಆಗಸ್ಟ್ 12ರಂದು ರಾಜ್ಯ ಪೊಲೀಸ್ ಪಡೆಗಳೊಂದಿಗೆ ರಿಯಲ್ಟೈಮ್ ಗುಪ್ತಚರ ಮಾಹಿತಿ ಹಂಚಿಕೆ ವ್ಯವಸ್ಥೆ ಬಳಸಿ ಸಂಯೋಜಿತ ಕಾರ್ಯಾಚರಣೆ ನಡೆಸಲಾಯಿತು. ಉತ್ತರ ಪ್ರದೇಶದಲ್ಲಿ 62, ಹರಿಯಾಣದಲ್ಲಿ 52, ದೆಹಲಿಯಲ್ಲಿ 51, ಪಂಜಾಬ್ನಲ್ಲಿ 44, ರಾಜಸ್ಥಾನದಲ್ಲಿ 15, ಮಹಾರಾಷ್ಟ್ರದಲ್ಲಿ 8, ಉತ್ತರಾಖಂಡದಲ್ಲಿ 5, ಕರ್ನಾಟಕ, ಗುಜರಾತ್ ಮತ್ತು ಬಿಹಾರದಲ್ಲಿ ತಲಾ 3 ಹಾಗೂ ತೆಲಂಗಾಣ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಕೇರಳದಲ್ಲಿ ತಲಾ ಇಬ್ಬರು ಸೇರಿದಂತೆ 253ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.