ನವದೆಹಲಿ, ಆ. 17 (DaijiworldNews/AK): ಯುಜಿಸಿ ನೆಟ್ ಪರೀಕ್ಷೆಯಲ್ಲಿನ ಅವ್ಯವಹಾರಗಳ ಹಿನ್ನೆಲೆಯಲ್ಲಿ ತೀವ್ರ ಟೀಕೆಗೆ ಒಳಗಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ ಸರ್ಕಾರ ಅಮೂಲಾಗ್ರ ಬದಲಾವಣೆ ತರಲು ಮುಂದಾಗಿದೆ.

ಎನ್ಟಿಎ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆಡಿಟ್ ನಡೆಸುವುದು, ಮತ್ತು ಪ್ರೋಟೋಕಾಲ್ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಇತ್ಯಾದಿ ಕ್ರಮಗಳಿಗೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಆದೇಶಿಸಿದ್ದಾರೆ.
ಪ್ರಲ್ಹಾದ್ ಜೋಶಿ ಅವರು ಇಂದು ಸೋಮವಾರ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ, ಎನ್ಟಿಎ ಮಹಾನಿರ್ದೇಶಕರು ಹಾಗು ಇತರ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ್ಧಾರೆ. ಈ ವೇಳೆ, ಎನ್ಟಿಎ ತಾನು ತೆಗೆದುಕೊಂಡ ಕೆಲ ಕ್ರಮಗಳ ಕುರಿತು ಶಿಕ್ಷಣ ಸಚಿವರಿಗೆ ಮಾಹಿತಿ ನೀಡಿದೆ:
ಸುಧಾರಣಾ ಕ್ರಮಗಳ ಭಾಗವಾಗಿ ಎನ್ಟಿಎಯ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ಈಗಾಗಲೇ ಕೆಲಸದಿಂದ ತೆಗೆದುಹಾಕಲಾಗಿದೆ. ಸಂಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಿಟಿಒ , ಸಿಎಫ್ಒ , ಮತ್ತು ಮಾಹಿತಿ ಭದ್ರತಾ ಅಧಿಕಾರಿ ಸೇರಿದಂತೆ 10 ಹೊಸ ಉನ್ನತ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಖಾಸಗಿ ವಲಯದ ತಜ್ಞರನ್ನು ಸೈಬರ್ ಭದ್ರತೆ ಮತ್ತು ಪರೀಕ್ಷಾ ಪ್ರಕ್ರಿಯೆಗಳಿಗಾಗಿ ನೇಮಿಸಿಕೊಳ್ಳಲಾಗುತ್ತಿದೆ.
ಪರೀಕ್ಷಾ ಪತ್ರಿಕೆಗಳ ಗೌಪ್ಯತೆಯನ್ನು ಕಾಪಾಡಲು ‘ಕಾನ್ಫಿಡೆನ್ಷಿಯಲ್ ಆಪರೇಷನ್ಸ್’ ಅನ್ನು ಸಂಪೂರ್ಣವಾಗಿ ಬದಲಾಯಿಸಲಾಗಬೇಕು. ಏರ್-ಗ್ಯಾಪ್ಡ್ ಸಿಸ್ಟಮ್ಗಳನ್ನು ಅಳವಡಿಸುವುದು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಾದ ಭದ್ರತಾ ನಿಯಮಗಳನ್ನು ಪಾಲಿಸಲು ಅಧಿಕಾರಿಗಳಿಗೆ ಪ್ರಲ್ಹಾದ ಜೋಶಿ ಸೂಚಿಸಿದ್ದಾರೆ.