ನವದೆಹಲಿ, ಆ. 17 (DaijiworldNews/AA): ಬಿಜೆಪಿ ಪಕ್ಷದ ಐಟಿ ಸೆಲ್ ಮುಖ್ಯಸ್ಥ ಸ್ಥಾನದಿಂದ ಅಮಿತ್ ಮಾಳವೀಯ ಅವರನ್ನು ಬದಲಾಯಿಸಿ ಛತ್ತೀಸ್ಗಢದ ದೀಪಕ್ ಮ್ಹಾಸ್ಕೆ ಅವರನ್ನು ನೂತನ ಮುಖ್ಯಸ್ಥರನ್ನಾಗಿ ನಿಯೋಜಿಸಲಾಗಿದೆ.

ಉತ್ತರ ಪ್ರದೇಶ, ಪಂಜಾಬ್ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಕೆಲವೇ ಕೆಲವು ತಿಂಗಳುಗಳು ಬಾಕಿ ಇದೆ. ಈ ಹಿನ್ನೆಲೆ ದೇಶಾದ್ಯಂತ ಪಕ್ಷದ ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯಚಟುವಟಿಕೆಗಳನ್ನು ಬಲಪಡಿಸುವ ಹಾಗೂ ಮರುಸಂಘಟಿಸುವ ಉದ್ದೇಶದಿಂದ ಕೇಂದ್ರ ಬಿಜೆಪಿಯಲ್ಲಿ ಬದಲಾವಣೆ ಮಾಡಲಾಗಿದೆ.
ಸಾಮಾಜಿಕ ಜಾಲತಾಣ ತಂಡದಲ್ಲೂ ಬದಲಾವಣೆ ಮಾಡಲಾಗಿದ್ದು, ನಾಲ್ಕು ರಾಜ್ಯಗಳಿಂದ ನೂತನ ಸಂಯೋಜಕರನ್ನು ನೇಮಿಸಲಾಗಿದೆ. ಪ್ರೀತಿ ಗಾಂಧಿ (ಮಹಾರಾಷ್ಟ್ರ), ಶಿವಾನಂದ್ ದ್ವಿವೇದಿ (ದೆಹಲಿ), ಅಲೋಕ್ ಭಟ್ (ಉತ್ತರಾಖಂಡ), ಅರುಣ್ ಯಾದವ್ (ಹರಿಯಾಣ) ಅವರನ್ನು ನೇಮಕ ಮಾಡಲಾಗಿದೆ.
ಈ ಹಿಂದಿನಂತೆ ಅನಿಲ್ ಬಲೂನಿ ಅವರು ಪಕ್ಷದ ರಾಷ್ಟ್ರೀಯ ಮಾಧ್ಯಮ ಸಂಚಾಲಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪಿಯೂಷ್ ಗೋಯಲ್ ಅವರನ್ನು ರಾಷ್ಟ್ರೀಯ ಕೋಶಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. ತರುಣ್ ಚುಗ್ ಅವರಿಗೆ ಕೇಂದ್ರ ಕಚೇರಿಯ ಉಸ್ತುವಾರಿ ನೀಡಲಾಗಿದೆ.
ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ ಸಿಂಧಿಯಾ, ರಾಮ್ ಮಾಧವ್, ಬೈಜಯಂತ್ ಜಯ ಪಾಂಡಾ, ಡಿ. ಪುರಂದೇಶ್ವರಿ, ರೇಖಾ ವರ್ಮಾ, ಡಾ. ಭಾರತಿ ಪವಾರ್ ಮತ್ತು ಮನ್ಪ್ರೀತ್ ಸಿಂಗ್ ಬಾದಲ್ ಸೇರಿದಂತೆ 13 ಮಂದಿಯನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ವಿನೋದ್ ತಾವ್ಡೆ, ಸುನಿಲ್ ಬನ್ಸಲ್, ಬಿಪ್ಲಬ್ ಕುಮಾರ್ ದೇಬ್, ಸ್ಮೃತಿ ಇರಾನಿ, ಸತೀಶ್ ಪೂನಿಯಾ, ಗಜೇಂದ್ರ ಪಟೇಲ್, ಹರೀಶ್ ದ್ವಿವೇದಿ ಮತ್ತು ಸಂಜಯ್ ಭಾಟಿಯಾ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಬಿ. ಎಲ್. ಸಂತೋಷ್ ಅವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದು, ಶಿವಪ್ರಕಾಶ್ ಹಾಗೂ ಸೌದಾನ್ ಸಿಂಗ್ ಅವರು ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕೆ. ಕವಿತಾ ಪಾಟಿದಾರ್, ಕೆ. ಸುರೇಂದ್ರನ್, ಭೋಲಾ ಸಿಂಗ್, ಪ್ರದೀಪ್ ವರ್ಮಾ, ಫಾಂಗ್ನಾನ್ ಕೊನ್ಯಾಕ್, ಅನಿಲ್ ಆಂಟನಿ, ಸಂದೀಪ್ ಪಾಠಕ್ ಮತ್ತು ಮನೋಜ್ ತಿಗ್ಗಾ ಮತ್ತಿತರರು ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ.