ಬೆಂಗಳೂರು, ಆ. 17 (DaijiworldNews/AA): ಶಾಲಾ ಮಕ್ಕಳಿಗೆ ಕೊಡುತ್ತಿರುವ ಮೊಟ್ಟೆ ದರ ಏರಿಕೆ ಬಗ್ಗೆ ಶೀಘ್ರವೇ ಹಣಕಾಸು ಇಲಾಖೆ ಜೊತೆ ಚರ್ಚೆ ಮಾಡಿ ತೀರ್ಮಾನಿಸುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿಗೌಡ ಪ್ರಶ್ನೆ ಕೇಳಿದರು. ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುತ್ತಿದೆ. ಈಗ ಸರ್ಕಾರ 6 ರೂಪಾಯಿ ಕೊಡುತ್ತಿದೆ. ಈಗ ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಜಾಸ್ತಿಯಾಗಿದೆ. ಒಂದು ವರ್ಷದಿಂದ 8 ರೂ. ಮೇಲೆ ದರ ಇದೆ. ಮಂತ್ರಿಗಳು 6 ರೂ. ಕೊಡುತ್ತೇವೆ ಅಂತಾರೆ. 6 ರೂ.ನಲ್ಲಿ 5 ರೂ. ಮಾತ್ರ ಶಾಲೆಗೆ ಹೋಗುತ್ತಿದೆ. ಮೊಟ್ಟೆ ದರ ಜಾಸ್ತಿ ಮಾಡಬೇಕು. ಮಾರುಕಟ್ಟೆ ದರ ಸರ್ಕಾರ ಕೊಡಬೇಕು. ಅಥವಾ ಮೊಟ್ಟೆ ವಿತರಣೆ ಏಜೆನ್ಸಿ ಕೊಡಿ ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, "ರಾಷ್ಟ್ರಮಟ್ಟದ ದರವನ್ನು ರಾಜ್ಯದಲ್ಲಿ ನಾವು ಫಿಕ್ಸ್ ಮಾಡುತ್ತೇವೆ. ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇರೋ ಕಡೆ ಮೊಟ್ಟೆ ಮ್ಯಾನೇಜ್ ಮಾಡುತ್ತಿದ್ದಾರೆ. 100% ಹಾಜರಾತಿ ಇರೋ ಕಡೆ ಮೊಟ್ಟೆ ದರ ಸಮಸ್ಯೆ ಆಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಈಗ 7 ರೂ. ದರ ಆಗಿದೆ. ಮೊಟ್ಟೆ ದರ ಏರಿಕೆ ಮಾಡುವ ಬಗ್ಗೆ ಹಣಕಾಸು ಇಲಾಖೆ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಮಾಹಿತಿ ನೀಡಿದರು.