ಲಕ್ನೋ, ಆ. 17 (DaijiworldNews/AA): ಐಪಿಎಸ್ ಅಧಿಕಾರಿಯ ತಾಯಿ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರು ಧರಿಸಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಅಂಬೇಡ್ಕರ್ನಗರದ ರುಧಾ ಧಮ್ರುವಾ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಇಂದ್ರಾವತಿ (91) ಎಂದು ಗುರುತಿಸಲಾಗಿದೆ. ಇಂದ್ರಾವತಿ ಅವರು 2016ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಅಶುತೋಷ್ ಮಿಶ್ರಾ ಅವರ ತಾಯಿಯಾಗಿದ್ದಾರೆ.
ಇಂದ್ರಾವತಿ ಅವರು ಒಂಟಿಯಾಗಿ ವಾಸಿಸುತ್ತಿದ್ದರು. ಆ.16ರ ಬೆಳಗ್ಗೆ 9 ಗಂಟೆಗೆ ಇಂದ್ರಾವತಿ ಅವರ ಮನೆಯೊಳಗಿನ ಮಂಚದ ಮೇಲೆ ಶವವಾಗಿ ಪತ್ತೆಯಾಗಿದೆ. ಮನೆಗೆಲಸದವರು ಮನೆಗೆ ಬಂದಾಗ ಮೃತದೇಹವನ್ನು ಕಂಡು ಮಾಹಿತಿ ನೀಡಿದ್ದಾರೆ.
ಸದ್ಯ ಲಕ್ನೋದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿ ಅಶುತೋಷ್ ಮಿಶ್ರಾ ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಗ್ರಾಮಕ್ಕೆ ಆಗಮಿಸಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಹಾಗೂ ದರೋಡೆ ಪ್ರಕರಣ ದಾಖಲಿಸುವಂತೆ ದೂರು ನೀಡಿದ್ದಾರೆ.
ಇಂದ್ರಾವತಿ ಧರಿಸಿದ್ದ ಚಿನ್ನದ ಸರ, ಮೂಗುತಿ, ಕಿವಿಯೋಲೆಗಳು ಮತ್ತು ಕಾಲುಚೈನ್ ನಾಪತ್ತೆಯಾಗಿವೆ. ಶನಿವಾರ ರಾತ್ರಿ ಕಳ್ಳರು ಮನೆಗೆ ನುಗ್ಗಿ, ಇಂದ್ರಾವತಿಯನ್ನು ಹತ್ಯೆ ಮಾಡಿದ ಬಳಿಕ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.