ಪಾಟ್ನ, ಆ. 17 (DaijiworldNews/AA): ಪೂಜಾ ಕೈಂಕರ್ಯಗಳು ಜರುಗುತ್ತಿದ್ದ ವೇಳೆ ಕಾಲ್ತುಳಿತ ಸಂಭವಿಸಿ 7 ಮಂದಿ ಸಾವನ್ನಪ್ಪಿ, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ಬೆಳಗ್ಗೆ ಬಿಹಾರದ ಲಖಿಸರಾಯ್ನಲ್ಲಿರುವ ಅಶೋಕ ಧಾಮ ದೇವಾಲಯದಲ್ಲಿ ನಡೆದಿದೆ.

ಪವಿತ್ರ ಶ್ರಾವಣ ಮಾಸದ ಮೂರನೇ ಸೋಮವಾರವಾದ ಇಂದು ಭಕ್ತರು ಶಿವನಿಗೆ ಪ್ರಾರ್ಥನೆ ಸಲ್ಲಿಸಲು ಹಾಗೂ ಜಲಾಭಿಷೇಕ (ಜಲ ಅರ್ಪಣೆ) ಮಾಡಲು ದೇವಾಲಯಕ್ಕೆ ಆಗಮಿಸಿದ್ದರು. ಸುಮಾರು 50,000 ಭಕ್ತರು ಶಿವನಿಗೆ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದರು ಎನ್ನಲಾಗಿದೆ.
ಪೂಜೆ ವೇಳೆ ಕಾಲ್ತುಳಿತ ಸಂಭವಿಸಿದ್ದು, 7 ಮಂದಿ ದುರ್ಮರಣ ಹೊಂದಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಾಹಿತಿ ತಿಳಿಯುತ್ತಿದ್ದಂತೆ ಆಡಳಿತ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ತಂಡಗಳು ಘಟನಾ ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯಾಚರಣೆ ಹಾಗೂ ವೈದ್ಯಕೀಯ ನೆರವು ಒದಗಿಸಿದ್ದಾರೆ. ಅಧಿಕಾರಿಗಳು ದೇವಾಲಯದ ಆವರಣದಲ್ಲಿ ಜನಸಂದಣಿ ನಿಯಂತ್ರಿಸಲು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.