ಆಗ್ರಾ, ಆ. 17 (DaijiworldNews/AA): ಉತ್ತರ ಪ್ರದೇಶದ ಆಗ್ರಾದ ಸಿವಿಲ್ ಇಂಜಿನಿಯರ್ ಅಭಿಷೇಕ್ ಚೌಧರಿ ಅವರು 2024ರ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 64ನೇ ರ್ಯಾಂಕ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ನಾಲ್ಕು ಪ್ರಯತ್ನಗಳ ಬಳಿಕ ಮತ್ತು ವರ್ಷಗಳ ಕಠಿಣ ತಯಾರಿ ನಡೆಸಿ ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗುವಲ್ಲಿ ಅವರು ಸಫಲರಾಗಿದ್ದಾರೆ.

ಅಭಿಷೇಕ್ ಅವರು 2016 ರಲ್ಲಿ ಗುಜರಾತ್ನ ಆನಂದ್ನಲ್ಲಿರುವ ಬಿವಿಎಂ ಇಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪೂರೈಸಿದ್ದರು. ನಾಗರಿಕ ಸೇವೆಗೆ ಬರುವ ಮೊದಲು ಅವರು ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುತ್ತಿದ್ದರು.
ಅಭಿಷೇಕ್ ಅವರು ಶಾಪೂರ್ಜಿ ಪಲ್ಲೋಂಜಿ ಕಂಪನಿಯಲ್ಲಿ ಪ್ಲಾನಿಂಗ್ ಇಂಜಿನಿಯರ್ ಆಗಿ ಎರಡು ವರ್ಷ ಕೆಲಸ ಮಾಡಿದ್ದರು. ಜೊತೆಗೆ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಇಲ್ಲಿಯೂ ಸಹ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
2020 ರ ಜುಲೈನಲ್ಲಿ ಯುಪಿಎಸ್ಸಿ ತಯಾರಿಯ ಮೇಲೆ ಪೂರ್ಣ ಗಮನ ಹರಿಸಲು ಅಭಿಷೇಕ್ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಅಭಿಷೇಕ್ ಅವರು ಯಾವುದೇ ದೊಡ್ಡ ಕೋಚಿಂಗ್ ಸೆಂಟರ್ಗೆ ಸೇರದೆ ತಮ್ಮ ಮನೆಯಲ್ಲೇ ಕುಳಿತು ಸಿದ್ಧತೆ ನಡೆಸಿದ್ದರು. ಆನ್ಲೈನ್ ಕೋರ್ಸ್ಗಳು ಹಾಗೂ ಯೂಟ್ಯೂಬ್ ಮತ್ತು ಟೆಲಿಗ್ರಾಮ್ನಂತಹ ವೇದಿಕೆಗಳಲ್ಲಿ ಲಭ್ಯವಿರುವ ಉಚಿತ ಸಂಪನ್ಮೂಲಗಳನ್ನು ಅವರು ಬಳಸಿಕೊಂಡರು.
2021 ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅಭಿಷೇಕ್ ಅವರಿಗೆ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಬಳಿಕ 2022ರಲ್ಲಿ ಎರಡನೇ ಬಾರಿಗೆ ಹಾಗೂ 2023ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. ಆದರೆ 2024ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು ಅಂತಿಮವಾಗಿ 64ನೇ ಅಖಿಲ ಭಾರತ ರ್ಯಾಂಕ್ ಪಡೆಯುವ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡರು.