ಇಂದೋರ್, ಜು. 27 (DaijiworldNews/AA): ಎರಡು ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಮೂರನೇ ಪ್ರಯತ್ನದಲ್ಲಿ ಅಖಿಲ ಭಾರತ 13ನೇ ರ್ಯಾಂಕ್ ಗಳಿಸುವ ಮೂಲಕ ಇಂದೋರ್ನ ಅನನ್ಯಾ ಶರ್ಮಾ ಅವರು ಸಾವಿರಾರು ಯುಪಿಎಸ್ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ. ನಿರಂತರ ಪರಿಶ್ರಮ, ಸರಿಯಾದ ತಂತ್ರ ಮತ್ತು ಅಚಲ ಸಂಕಲ್ಪ ಇದ್ದರೆ ಯಾವುದೇ ವೈಫಲ್ಯವನ್ನು ಯಶಸ್ಸಾಗಿ ಪರಿವರ್ತಿಸಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಕುಟುಂಬದಲ್ಲಿ ಜನಿಸಿದ ಅನನ್ಯಾ ಅವರ ತಂದೆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದು, ತಾಯಿ ಇಂದೋರ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ. ಅವರು ಇಂದೋರ್ನ ಡೇಲಿ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ, ಬಳಿಕ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದಾರೆ.
ಅನನ್ಯಾ ಐಎಫ್ಎಸ್ ಸೇರುವ ಕನಸನ್ನು ನನಸಾಗಿಸಲು ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ. ಅನನ್ಯಾ ತಮ್ಮ ಮೊದಲ ಎರಡು ಪ್ರಯತ್ನಗಳಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಫಲವಾದ ನಂತರ ಅವರು ತಮ್ಮ ಸಂಪೂರ್ಣ ಅಧ್ಯಯನ ತಂತ್ರವನ್ನು ಬದಲಾಯಿಸಿದರು. ಮೂರನೇ ಬಾರಿಗೆ ಪರೀಕ್ಷೆ ಬರೆದ ಅವರು ಅಖಿಲ ಭಾರತ 13ನೇ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿತ್ತಾರೆ.
ತಮ್ಮ ಯಶಸ್ಸಿನ ಪಯಣವನ್ನು ನೆನಪಿಸಿಕೊಂಡ ಅನನ್ಯಾ, ಪ್ರತಿಯೊಬ್ಬ ಯುಪಿಎಸ್ಸಿ ಅಭ್ಯರ್ಥಿಗೂ ಆತ್ಮವಿಶ್ವಾಸ, ತಾಳ್ಮೆ ಮತ್ತು ನಿರಂತರ ಪರಿಶ್ರಮ ಅತ್ಯಗತ್ಯ ಎಂದು ಹೇಳಿದ್ದಾರೆ. ಯುಪಿಎಸ್ಸಿ ತಯಾರಿ ಅನೇಕ ನಿರಾಸೆಗಳು ಮತ್ತು ಸವಾಲುಗಳಿಂದ ಕೂಡಿರುತ್ತದೆ. ಆದರೆ ಅಂತಿಮ ಆಯ್ಕೆ ಪಟ್ಟಿಯಲ್ಲಿ ತನ್ನ ಹೆಸರು ಕಾಣುವ ಸಂತೋಷವು ಆ ಎಲ್ಲ ಕಷ್ಟಗಳನ್ನು ಮರೆಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.