ಬೆಂಗಳೂರು, ಜು. 25 (DaijiworldNews/TA): ಬಿಪಿಎಲ್ ಪಡಿತರ ಚೀಟಿ ಪಡೆಯಲು ಕಾಯುತ್ತಿರುವ ಸಾವಿರಾರು ಕುಟುಂಬಗಳಿಗೆ ರಾಜ್ಯ ಸರ್ಕಾರ ಮಹತ್ವದ ಗುಡ್ನ್ಯೂಸ್ ನೀಡಿದೆ. ಬಿಪಿಎಲ್ ಕಾರ್ಡ್ಗೆ ನಿಗದಿಪಡಿಸಿದ್ದ ವಾರ್ಷಿಕ ಆದಾಯ ಮಿತಿಯನ್ನುರೂ. 1.20 ಲಕ್ಷದಿಂದ ರೂ. 3 ಲಕ್ಷಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಇದರಿಂದ ಹೆಚ್ಚಿನ ಕುಟುಂಬಗಳು ಬಿಪಿಎಲ್ ಸೌಲಭ್ಯ ಪಡೆಯುವ ಸಾಧ್ಯತೆ ಮೂಡಿದೆ.

ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಈ ಕುರಿತು ಮಾಹಿತಿ ನೀಡಿದರು. ಆಡಳಿತ ಸುಧಾರಣೆ ಆಯೋಗದ ಶಿಫಾರಸಿನಂತೆ ಆದಾಯ ಮಿತಿ ಹೆಚ್ಚಳದ ಪ್ರಕ್ರಿಯೆ ಆರಂಭಿಸಲಾಗಿದ್ದು, ಸರ್ಕಾರ ಶೀಘ್ರದಲ್ಲೇ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಪಡಿತರ ಚೀಟಿಗಳ ಪರಿಶೀಲನೆ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ನಡೆಯುತ್ತಿದ್ದು, ಯಾವುದೇ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಪರಿಶೀಲನೆಯಲ್ಲಿ ಅನರ್ಹ ಎಂದು ಗುರುತಿಸಲಾದ ಕಾರ್ಡ್ಗಳನ್ನು ಮಾತ್ರ ಎಪಿಎಲ್ (APL) ಕಾರ್ಡ್ಗಳಿಗೆ ವರ್ಗಾಯಿಸಲಾಗುವುದು ಎಂದರು. ಪಡಿತರ ಕಾಳಸಂತೆಯನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಗೋದಾಮುಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಜೊತೆಗೆ ಪಡಿತರ ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಸಿ ಕೇಂದ್ರ ಕಚೇರಿಯಿಂದಲೇ ಕಮಾಂಡ್ ಮತ್ತು ಕಂಟ್ರೋಲ್ ರೂಂ ಮೂಲಕ ನಿಗಾ ವಹಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.
ಅಕ್ರಮ ಪಡಿತರ ಮಾರಾಟದ ವಿರುದ್ಧ ಇದುವರೆಗೆ 1,497 ಎಫ್ಐಆರ್ಗಳು ದಾಖಲಾಗಿದ್ದು, ಸುಮಾರು ರೂ. 50 ಕೋಟಿ ಮೌಲ್ಯದ ಪಡಿತರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ರಾಜ್ಯ ಸರ್ಕಾರ 5.60 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸಿದ್ದು, ಅದನ್ನು ಸಂಸ್ಕರಿಸಿ ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಬಹುನಿರೀಕ್ಷಿತ ಇಂದಿರಾ ಕಿಟ್ ಯೋಜನೆಗೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮುಂದಿನ ಎರಡು ತಿಂಗಳೊಳಗೆ ಕಿಟ್ ವಿತರಣೆಗೆ ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಸುಮಾರು ರೂ. 6,000 ಕೋಟಿ ವೆಚ್ಚದ ಈ ಯೋಜನೆ ಅತ್ಯಂತ ದೊಡ್ಡ ಮಟ್ಟದಲ್ಲಿ ಜಾರಿಯಾಗಲಿರುವುದರಿಂದ ಎಲ್ಲಾ ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರಣದಿಂದ ಸ್ವಲ್ಪ ವಿಳಂಬವಾಗಿದ್ದು, ಶೀಘ್ರದಲ್ಲೇ ವಿತರಣೆ ಆರಂಭವಾಗಲಿದೆ ಎಂದು ಭರವಸೆ ನೀಡಿದರು. ರಾಜ್ಯದ 20,259 ನ್ಯಾಯಬೆಲೆ ಅಂಗಡಿಗಳಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ಹಾಗೂ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರ ಭಾವಚಿತ್ರ ಮತ್ತು ಸಂಪರ್ಕ ಸಂಖ್ಯೆಯನ್ನು ಅಳವಡಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಇದಲ್ಲದೆ, ನ್ಯಾಯಬೆಲೆ ಅಂಗಡಿಗಳನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ತೆರೆದಿಡುವಂತೆ ಸೂಚನೆ ನೀಡಲಾಗಿದೆ. ಪಡಿತರ ವಿತರಣೆಯಲ್ಲಿ ಯಾವುದೇ ಸಮಸ್ಯೆ ಎದುರಾದರೆ ಸಾರ್ವಜನಿಕರು ಇಲಾಖೆಯ ಸಹಾಯವಾಣಿ 1967ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ.
ಮುಂದಿನ ದಿನಗಳಲ್ಲಿ ಫಲಾನುಭವಿಗಳು ಕರ್ತವ್ಯ ಆ್ಯಪ್ ಮಾದರಿಯಲ್ಲಿ ತಮ್ಮ ಮೊಬೈಲ್ಗಳ ಮೂಲಕವೇ ಸ್ವಯಂ ಇ-ಕೆವೈಸಿ (e-KYC) ಮಾಡಿಕೊಳ್ಳುವ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ವಿಶೇಷವಾಗಿ ಬೆಂಗಳೂರು ನಗರದಲ್ಲಿನ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಬರುವ ದೂರುಗಳಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.